ದೇಶಪ್ರಮುಖ ಸುದ್ದಿ

ರೆಪೋ ದರ ಮುಂದುವರಿಸಿದ ಆರ್ ಬಿಐ: ಸತತ ಆರನೇ ಬಾರಿಯೂ ಯಥಾಸ್ಥಿತಿ ಮುಂದುವರಿಕೆ

ನವದೆಹಲಿ,ಜೂ.4- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸತತ ಆರನೇ ಬಾರಿಗೆ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆದ ಜೂನ್ ನೀತಿ ಪರಾಮರ್ಶನಾ ಸಭೆಯಲ್ಲಿ ಆರ್‌ಬಿಐ ತನ್ನ ಹಿಂದಿನ ರೆಪೋ ದರವನ್ನೇ ಮುಂದುವರಿಸಲು ನಿರ್ಧರಿಸಿದೆ.

ರೆಪೋ ದರವನ್ನು ಶೇ.4ರಲ್ಲಿಯೇ ಉಳಿಸಿಕೊಳ್ಳಲಾಗಿದೆ. ರಿವರ್ಸ್ ರೆಪೋ ದರ ಶೇ 3.35ರಲ್ಲಿಯೇ ಉಳಿದಿದೆ. 2021-22ನೇ ಹಣಕಾಸು ಸಾಲಿನ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ಆರ್‌ಬಿಐ ಶೇ 9.5ರಷ್ಟು ಇರಲಿದೆ ಎಂದು ಅಂದಾಜಿಸಿದೆ.

ಕೋವಿಡ್ 19 ಎರಡನೆಯ ಅಲೆಯಿಂದ ಉಂಟಾಗಿರುವ ಆರ್ಥಿಕ ಚಟುವಟಿಕೆಗಳ ಅನಿಶ್ಚಿತತೆಗಳ ಕಾರಣದಿಂದ ಕೇಂದ್ರ ಬ್ಯಾಂಕ್ ಈ ಯಥಾಸ್ಥಿತಿಯ ನಿಲುವನ್ನು ಮುಂದುವರಿಸಿದೆ. ಆರ್‌ಬಿಐ ‘ಚೌಕಟ್ಟಿನಿಂದ ಆಚೆ’ ಚಿಂತಿಸುವ ಮತ್ತು ಯೋಜನೆ ರೂಪಿಸುವ ಕಾರ್ಯವನ್ನು ಮುಂದುವರಿಸಲಿದೆ ಎಂದು ಗವರ್ನರ್ ತಿಳಿಸಿದ್ದಾರೆ.

ಇತ್ತೀಚಿನ ಹಣದುಬ್ಬರ ಕುಸಿತವು ತ್ವರಿತ ಬೆಳವಣಿಗೆಯನ್ನು ಮರಳಿ ಪಡೆದುಕೊಳ್ಳಲು ಅಗತ್ಯವಾದ ಎಲ್ಲ ಬಗೆಯ ಅನುಕೂಲಕರ ಬೆಂಬಲವನ್ನು ಒದಗಿಸಿದೆ. ವಿದೇಶಿ ವಿನಿಮಯ ಮೀಸಲು 600 ಬಿಲಿಯನ್ ಡಾಲರ್ ಗಡಿ ದಾಟುವ ನಿರೀಕ್ಷೆಯಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್‌ಬಿಐ, ಸರ್ಕಾರದ 40,000 ಕೋಟಿ ರೂ. ಭದ್ರತಾ ಠೇವಣಿಗಳನ್ನು ಜೂನ್ 17ರಂದು ಖರೀದಿಸಲಿದೆ. ಎರಡನೆಯ ತ್ರೈಮಾಸಿಕ ಅವಧಿಯಲ್ಲಿ 1.20 ಲಕ್ಷ ಕೋಟಿ ರೂ. ಸೆಕ್ಯುರಿಟಿಗಳನ್ನು ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: