ದೇಶಪ್ರಮುಖ ಸುದ್ದಿ

ಪತಂಜಲಿ ಆಮ್ಲಾ ಜ್ಯೂಸ್ ಸುರಕ್ಷಿತವಲ್ಲ ಎಂದ ಪ್ರಯೋಗಾಲಯ ವರದಿ: ಸೇನೆಯಲ್ಲಿ ನಿಷೇಧ

ನವದೆಹಲಿ: ಪತಂಜಲಿ ಆಯುರ್ವೇದ ಆಮ್ಲಾ ಜ್ಯೂಸ್ ಪ್ರಯೋಗಾಲಯ ಪರೀಕ್ಷೆಯಲ್ಲಿ ಅಸುರಕ್ಷಿತವೆಂದು ವರದಿ ಬಂದ ಕಾರಣ ಭಾರತೀಯ ಸೇನಾ ಯೋಧರ ಕ್ಯಾಂಪ್’ಗಳಲ್ಲಿ ಇದನ್ನು ನಿಷೇಧಿಸಲಾಗಿದೆ.

ಸೇನೆಯ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ ಮೆಂಟ್‍ನ ಗ್ರಾಹಕ ವಸ್ತುಗಳ ಮಾರಾಟದ ಚಿಲ್ಲರೆ ಘಟಕಗಳಲ್ಲಿ ಜ್ಯೂಸ್ ಮಾರಾಟವನ್ನು ನಿಷೇಧಿಸಲಾಗಿದ್ದು, ಯೋಗಗುರು ಬಾಬಾ ರಾಮ್ ದೇವ್ ಅವರ ಕಂಪನಿಗೆ ತೀವ್ರ ಹಿನ್ನಡೆಯಾಗಿದೆ.

ಈ ಕುರಿತು ಪ್ರತಿಯಕ್ರಿಯೆ ನೀಡಿರುವ ಪತಂಜಲಿ ಕಂಪೆನಿ, ನೆಲ್ಲಿಕಾಯಿ ಜ್ಯೂಸ್ ಔಷಧೀಯ ವಸ್ತುವಾಗಿದ್ದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಇತರ ಜ್ಯೂಸ್ ಗಳಂತೆ ಅಲ್ಲ. ಇದು ಮಾನವನ ಸೇವನೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದೆ.

ಕೋಲ್ಕತ್ತಾದ ಪಶ್ಚಿಮ ಬಂಗಾಳ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಜ್ಯೂಸ್ ಅನ್ನು ಪರೀಕ್ಷೆ ಒಳಪಡಿಸಲಾಗಿದ್ದು ಸೇವನೆಗೆ ಸುರಕ್ಷಿತವಲ್ಲ ಎಂದು ತಿಳಿದುಬಂದ ಕಾರಣ ಪತಂಜಲಿ ಕಂಪೆನಿಗೆ ಶೋಕಾಸ್ ನೊಟೀಸ್ ಕಳುಹಿಸಲಾಗಿದೆ ಮತ್ತು ಜ್ಯೂಸ್ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಹರ್ಯಾಣದಲ್ಲೂ ಇಂತಹುದೇ ಪ್ರಕರಣ ವರದಿಯಾಗಿದ್ದು, ಪತಂಜಲಿ ಅಟ್ಟಾ ನೂಡಲ್ಸ್’ನಲ್ಲಿ ಕೀಟಗಳು ಮತ್ತು ಹರಿದ್ವಾರದಲ್ಲಿ ಪತಂಜಲಿ ತುಪ್ಪದ ಪ್ಯಾಕೆಟ್‍ನಲ್ಲಿ ಫಂಗಸ್ ಕಾಣಿಸಿಕೊಂಡಿತ್ತು ಎಂಬ ವರದಿಗಳು ಬಂದಿದ್ದವು.

(ಎನ್.ಬಿ.ಎನ್)

Leave a Reply

comments

Related Articles

error: