ಕರ್ನಾಟಕಪ್ರಮುಖ ಸುದ್ದಿ

ಕೆಎಸ್ಆರ್ ಟಿಸಿ ಕೇರಳ ಪಾಲಾಗಿಲ್ಲ: ವಿವಾದದ ಬಗ್ಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ

ಬೆಂಗಳೂರು,ಜೂ.5-ಕರ್ನಾಟಕ ಮತ್ತು ಕೇರಳ ನಡುವಿನ ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್‌ ಪ್ರಕರಣದಲ್ಲಿ ಕೇಂದ್ರ ಟ್ರೇಡ್‌ಮಾರ್ಕ್‌ ರಿಜಿಸ್ಟ್ರಿ ಅಥವಾ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ ಯಾವುದೇ ಆದೇಶ ಹೊರಡಿಸಿಲ್ಲ. ಹಾಗಾಗಿ, ಎಂದಿನಂತೆ ಕರ್ನಾಟಕದ `ಕೆಎಸ್‌ಆರ್‌ಟಿಸಿ’ ಬ್ರ್ಯಾಂಡ್‌ ಬಳಕೆ ಮುಂದುವರಿಯಲಿದೆ.

ಕೇಂದ್ರ ಟ್ರೇಡ್‌ಮಾರ್ಕ್‌ ರಿಜಿಸ್ಟ್ರಿಯಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶವನ್ನು ಇದುವರೆಗೆ ಹೊರಡಿಸಲಾಗಿಲ್ಲ. ಹೀಗಿರುವಾಗ, ಕೆಎಸ್‌ಆರ್‌ಟಿಸಿಯು ತನ್ನ ಟ್ರೇಡ್‌ ಮಾರ್ಕ್‌ಗಳನ್ನು ಬಳಸುವಂತಿಲ್ಲ ಎಂಬ ವದಂತಿ ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿಯೂ ಒಪ್ಪಲಾಗದು ಎಂದು ಕೆಎಸ್‌ ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.

ಕೇರಳ ಕೆಎಸ್‌ಆರ್‌ಟಿಸಿಯು, ಕೆಎಸ್‌ಆರ್‌ಟಿಸಿ ಅಥವಾ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಲು ಉದ್ದೇಶಿಸಿದೆ ಎಂಬ ಸುದ್ದಿ ಸಿಕ್ಕಿದೆ. ಅಂತಹ ನೋಟಿಸ್‌ ಬಂದರೆ ಉತ್ತರ ನೀಡಲಾಗುವುದು. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಮಾನ್ಯವಾಗಿ ಟ್ರೇಡ್‌ಮಾರ್ಕ್‌ ಅನ್ನು ಏಜೆನ್ಸಿಯೊಂದರ ಮೂಲಕ ಅರ್ಜಿ ಹಾಕಿ ಪಡೆಯಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ 2010ರಲ್ಲೇ ಸಲ್ಲಿಸಿ, 2013ರಲ್ಲಿ ಪಡೆದುಕೊಂಡಿದೆ. ಇದರ ಅವಧಿ 2023ರವರೆಗೂ ಇದೆ. ಇದೇ ರೀತಿ, ಕೇರಳ ಕೆಎಸ್‌ಆರ್‌ಟಿಸಿ 2019ರಲ್ಲಿ ಟ್ರೇಡ್‌ಮಾರ್ಕ್‌ಗೆ ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸಿತ್ತು. ಅನುಮೋದನೆಗೊಂಡರೂ ಪ್ರಮಾಣಪತ್ರ ಈಚೆಗೆ ಲಭ್ಯವಾಗಿರುವ ಸಾಧ್ಯತೆ ಇದೆ. ಆ ಪ್ರಮಾಣಪತ್ರವನ್ನೇ ಕೇರಳವು ತಪ್ಪಾಗಿ ಗ್ರಹಿಸಿದ್ದರಿಂದ ಈ ಗೊಂದಲ ಉಂಟಾಗಿರಬಹುದು ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕೆಎಸ್ಆರ್ ಟಿಸಿ ಬ್ರ್ಯಾಂಡ್ ಕೇರಳದ ಪಾಲಾಗಿಲ್ಲ. ಅದು ಕರ್ನಾಟಕದ ಕೈತಪ್ಪಿದೆ ಎಂಬ ಆತಂಕ ಇಲ್ಲ. ಕೆಎಸ್ಆರ್ ಟಿಸಿ ಎಂಬ ಹೆಸರನ್ನು ಬಳಸಲು ನಾವು ಸ್ವತಂತ್ರವಾಗಿದ್ದೇವೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದಿದ್ದಾರೆ.

ಕೇರಳ 1965ರಿಂದಲೇ ಕೆಎಸ್​ಆರ್​ಟಿಸಿ ಟ್ರೇಡ್​ ಮಾರ್ಕ್​ನ್ನು ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ ಕೆಎಸ್​ಆರ್​​ಟಿಸಿ ಹೆಸರನ್ನು ಬಳಸುತ್ತಿದೆ. ಹೀಗಾಗಿ ನಾವು ಮೊದಲು ಕೆಎಸ್​ಆರ್​ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್​ ಕೊಡಬೇಕೆಂದು ಕೇರಳ ಕಾನೂನು ಹೋರಾಟ ನಡೆಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್ ಮಾರ್ಕ್​ಗಳ ರಿಜಿಸ್ಟರ್​ಗೆ ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಈ ಎರಡೂ ರಾಜ್ಯಗಳ ತಿಕ್ಕಾಟದ ಬಗ್ಗೆ ಸುದೀರ್ಘ 8 ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟದಲ್ಲಿ ಕೊನೆಗೆ ಅಂತಿಮವಾಗಿ ಕೇರಳಕ್ಕೆ ಜಯ ಸಿಕ್ಕಿತ್ತು. ಕೆಎಸ್​ಆರ್​ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಟ್ರೇಡ್​ ಮಾರ್ಕ್ ರಿಜಿಸ್ಟ್ರಿ ಕೇರಳ ಸರ್ಕಾರಕ್ಕೆ ಕೆಎಸ್​ಆರ್​​ಟಿಸಿ ಟ್ರೇಡ್​​ ಮಾರ್ಕ್​ ನೀಡಿತ್ತು. ಆದರೆ, ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಲೋಗೋ ಬಳಸಬಾರದು ಎಂದು ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: