ಕರ್ನಾಟಕಪ್ರಮುಖ ಸುದ್ದಿ

56 ಗಂಟೆಗಳ ಸತತ ಕಾರ್ಯಾಚರಣೆ ವ್ಯರ್ಥ; ಕೊಳವೆ ಬಾವಿಯಲ್ಲೇ ಅಸುನೀಗಿದ ಬಾಲಕಿ ಕಾವೇರಿ

ಅಥಣಿ: ಕೊಳವೆ ಬಾವಿಯಲ್ಲಿ ಬಿದ್ದಿದ್ದ ಬಾಲಕಿ ‘ಕಾವೇರಿ’ ಕೊನೆಗೂ ಬದುಕಿ ಬರಲಿಲ್ಲ. ಇದರೊಂದಿಗೆ ಬಾಲಕಿಯನ್ನು ಸುರಕ್ಷಿತವಾಗಿ ಮೇಲೆತ್ತಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ನಡೆಸಿದ ಸತತ ಪರಿಶ್ರಮ ಬಾಲಕಿ ಕಾವೇರಿಯನ್ನು ಬದುಕಿಸಲಿಲ್ಲ.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಆರು ವರ್ಷದ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದಿದ್ದ ನತದೃಷ್ಟೆ. ಆಕೆಯನ್ನು ಬದುಕಿಸಲು ಸತತ 56 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಏಪ್ರಿಲ್ 22 ರಂದು ತನ್ನ ಸೋದರ ಸಂಬಂಧಿಗಳೊಂದಿಗೆ ಕಟ್ಟಿಗೆ ಆಯಲು ಹೋಗಿದ್ದ ಕಾವೇರಿ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಕಳೆದ ಮೂರು ದಿನಗಳಿಂದ ಆಕೆಯನ್ನು ರಕ್ಷಿಸಲು ಕಾರ್ಯಾಚರಣೆ ನಡೆದಿತ್ತು, ಸೋಮವಾರ ಮಧ್ಯರಾತ್ರಿ ರಕ್ಷಣಾ ತಂಡ ಕಾವೇರಿಯ ಮೃತ ದೇಹವನ್ನು ಹೊರತೆಗೆಯಲಾಯಿತು. 28 ಅಡಿ ಆಳಕ್ಕೆ ಬಿದ್ದಿದ್ದ ಕಾವೇರಿ ದುರಂತ ಅಂತ್ಯ ಕಂಡಿದ್ದಾಳೆ. ಕಾವೇರಿ ಪೋಷಕರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಧ್ಯರಾತ್ರಿ ಮೃತದೇಹವನ್ನ ಹೊರತೆಗೆದ ಬಳಿಕ ಕೊಕಟನೂರಿನ ಆಸ್ಪತ್ರೆಗೆ ಮೃತದೇಹ ತಲುಪಿತು. ಅಲ್ಲಿ ಮರಣೋತ್ತರ ಪರೀಕ್ಷೆ ಆದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಾವಿಗೆ ಬಿದ್ದ ಕೆಲವೇ ಗಂಟೆಗಳಲ್ಲಿ ಕಾವೇರಿ ಮೃತ ಪಟ್ಟಿದ್ದಾಳೆಂದು ವೈದ್ಯರು ಶಂಕಿಸಿದ್ದಾರೆ. ಬೆಳಗಾವಿ ಪೊಲೀಸರು ಜಮೀನು ಮಾಲೀಕನ ವಿರುದ್ಧ ಕೇಸು ದಾಖಲಿಸಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: