ಮೈಸೂರು

ಕಿತ್ತಾಟದ ಮೂಲಕ ಮನರಂಜನೆ ನೀಡುತ್ತಿರುವ ಐಎಎಸ್ ಅಧಿಕಾರಿಗಳನ್ನು ಹೊರ ಹಾಕುವಂತೆ ಒತ್ತಾಯ

ಮೈಸೂರು,ಜೂ.5:-ಕೊರೋನಾ ಸಂಕಷ್ಟದ ನಡುವೆಯೂ ಕಿತ್ತಾಟದ ಮೂಲಕ ಮನರಂಜನೆ ನೀಡುತ್ತಿರುವ ಐಎಎಸ್ ಅಧಿಕಾರಿಗಳನ್ನು ಹೊರ ಹಾಕುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರ ಕಛೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ನಿರತರು ಮಾತನಾಡಿ ಕೊರೋನಾ ಸಂಕಷ್ಟದಲ್ಲಿ ಸಾಕಷ್ಟು ಸಾವು ನೋವು ಸಂಭವಿಸುತ್ತಿದ್ದು, ಜನರ ರಕ್ಷಣೆಗೆ ನಿಲ್ಲಬೇಕಾದ ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆಯ ಆಯುಕ್ತರು ಐಎಎಸ್ ಅಧಿಕಾರಿಗಳು ಎಂಬುದನ್ನೂ ಮರೆತು ತಮ್ಮ ದೊಂಬರಾಟದ ಮನೋರಂಜನೆ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳು ಜಿಲ್ಲೆಗೆ ಬೇಕಾಗಿಲ್ಲ. ಇಬ್ಬರನ್ನೂ ಕೂಡಲೇ ಹೊರಗೆ ಹಾಕಲು ಸರ್ಕಾರಕ್ಕೆ ವರದಿ ನೀಡಿ ಎಂದು ಪ್ರಾದೇಶಿಕ ವಿಭಾಗಾಧಿಕಾರಿ ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕುರುಬೂರು ಶಾಂತಕುಮಾರ್ ಮಾತನಾಡಿ ಜವಾಬ್ದಾರಿಯನ್ನು ಮರೆತು ಕೋಳಿ ಜಗಳ ಆಡುವ ಮೂಲಕ ಜನಸೇವೆ ಮರೆತು ಐಎಎಸ್ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ. ಜನ ಕೊರೋನಾ ಸೂತಕದ ನಡುವೆ ಸಿಲುಕಿ ನರಳಾಡುತ್ತಿದ್ದಾರೆ. ಇವರು ಸೇವೆ ಮಾಡುವ ಬದಲು ಮನೋರಂಜನೆ ನೀಡುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡುವ ಮೂಲಕ ಜನರಿಗೆ ದ್ರೋಹ ಬಗೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ಕಣ್ಣು-ಕಿವಿ ಇದ್ದರೆ ಸಂಕಷ್ಟದಲ್ಲಿರುವ ಜನರ ರಕ್ಷಣೆ ಮಾಡುವ ನೈತಿಕತೆ ಇದ್ದರೆ ಕೂಡಲೇ ಇಬ್ಬರನ್ನು ಮೈಸೂರಿನಿಂದ ಹೊರಗೆ ಜನ ಸಂಪರ್ಕವಿಲ್ಲದ ಕಛೇರಿಗಳಿಗೆ ಹಾಕಿ ಇಲ್ಲಿಗೆ ಉತ್ತಮ ಅಧಿಕಾರಿಗಳನ್ನು ನೇಮಿಸಿ ಜನರನ್ನು ಕೊರೋನಾ ಸಂಕಷ್ಟದಿಂದ ಪಾರು ಮಾಡಿ ಎಂದು ಒತ್ತಾಯಿಸಿದರು.

ಈ ಸಂದರ್ಭ ತಾಲೂಕು ಅಧ್ಯಕ್ಷ ಗಳಗರ ಹುಂಡಿ ವೆಂಕಟೇಶ್, ಬರಡನಪುರ ನಾಗರಾಜ್, ದೇವೇಂದ್ರ ಕುಮಾರ್ ಎಸ್ ಮಹೇಶ್ ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: