ಮೈಸೂರು

ಹೆಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಮೈಸೂರು, ಜೂ.5:- ಕುವೆಂಪುನಗರದ ವಾರ್ಡ್ ನಂ.47ರ ವಿಶ್ವನಂದನ ಉದ್ಯಾನವನದಲ್ಲಿ ಇಂದು ಹೆಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ನಗರಪಾಲಿಕಾ ಸದಸ್ಯರಾದ ಶಿವಕುಮಾರ್ ಅವರು ಇಂದು ಆಮ್ಲಜನಕದ ಕೊರತೆಯಿಂದ ಪ್ರತಿನಿತ್ಯವೂ ನೂರಾರು ಜನರು ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಾಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದಕ್ಕೆ ಬಹಳ ಮುಖ್ಯ ಕಾರಣ ಪರಿಸರ. ಪರಿಸರದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಪೋಷಿಸಿ, ಬೆಳೆಸಿ, ಉಳಿಸಿದಾಗ ಆಮ್ಲಜನಕದ ಕೊರತೆಯನ್ನು ನೀಗಿಸಬಹುದೆಂದು ತಿಳಿಸಿದರು. ಇಂದು ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು. ಅದನ್ನು ಬೆಳೆಸುವ ಪ್ರಯತ್ನವಾಗಬೇಕು. ಇಲ್ಲದಿದ್ದರೆ ವಿಶ್ವಪರಿಸರ ದಿನಕ್ಕೆ ಅರ್ಥವೇ ಇರುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಘಟನೆಯು ಶೇಕಡ 33ರಷ್ಟು ಹಸರೀಕರಣ ಇರಬೇಕು ಎಂದು ಸಂಶೋಧನೆಯಿಂದ ದೃಢಪರಿಸಿದೆ. ಆದರೆ ಇಂದು ನಾವು ಶೇಕಡ 23ರಷ್ಟು ಮಾತ್ರ ಸುತ್ತಮುತ್ತಲಿನ ಹಸರೀಕರಣವನ್ನು ಕಾಣುತ್ತಿದ್ದೇವೆ. ಇದರ ಹಸರೀಕರಣ ಜಾಸ್ತಿಯಾಗಬೇಕು. ಹಿಂದೆ ರಾಜಮಹಾರಾಜರು ದೂರದೃಷ್ಟಿಯನ್ನು ಇಟ್ಟುಕೊಂಡು ರಸ್ತೆಯ ಅಕ್ಕಪಕ್ಕಗಳನ್ನು, ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು, ಪೋಷಿಸುತ್ತಿದ್ದುದು ಇದೇ ಉದ್ದೇಶದಿಂದ. ಈ ಪರಂಪರೆ ಇಂದಿಗೂ ಮುಂದುವರೆಯಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗಾಯಕ ಹಾಗೂ ವಕೀಲ ಎಲ್.ಚಂದ್ರಶೇಖರ್ ಮಾತನಾಡಿ, ವಿಶ್ವಪರಿಸರ ದಿನ ನಿತ್ಯ ಪರಿಸರ ದಿನವಾಗಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಯುವಜನಾಂಗದ ಗುರಿಯಾಗಬೇಕು. ಮನುಷ್ಯನ ಆಧುನಿಕ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಇರುವುದು ಪ್ರಕೃತಿಗೆ ಮಾತ್ರ. ಈ ಪ್ರಕೃತಿಯನ್ನು ನಿರಂತರವಾಗಿ ಕಾಪಾಡಿಕೊಂಡಲ್ಲಿ ಹೆಚ್ಚು ಆರೋಗ್ಯಕರವಾಗಿ ಮನುಷ್ಯ ಬದುಕಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ನಿಂಗೇಗೌಡ, ರಾಜೀವ್ ಸ್ನೇಹ ಬಳಗದ ಗೌರವ ಸದಸ್ಯ ಹುಡ್ಕೊ ಕುಮಾರ್, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಕೆ.ಮುರುಳಿ, ಸಂತೋಷ್, ಚಂದ್ರಶೇಖರ್, ಅಶೋಕ್, ರಂಗಸ್ವಾಮಿ, ವಿಶ್ವನಾಥ್, ಶಿವಮಲ್ಲು, ಜ್ಯೋತಿ ಹಾಗೂ ಮೂಲ ನಿವಾಸಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿಶ್ವನಂದನ ಉದ್ಯಾನವನದ ಸುತ್ತಮುತ್ತ ಸಸಿ ನೆಡುವ ಕಾರ್ಯಕ್ರಮ ನಡೆಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: