ಕರ್ನಾಟಕಪ್ರಮುಖ ಸುದ್ದಿ

ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ: ಪತಿಯ ನೆನಪಿನಲ್ಲಿ ಮೇಘನಾ ರಾಜ್; ಭಾವುಕ ಪತ್ರ ಹಂಚಿಕೊಂಡ ಕುಟುಂಬ

ಬೆಂಗಳೂರು,ಜೂ.7-ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ ಒಂದು ವರ್ಷ. ಇದೇ ದಿನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.

ಚಿರು ಅಗಲಿಕೆಯ ನೋವಿನಿಂದ ಕುಟುಂಬದವರು ಇನ್ನು ಹೊರಬಂದಿಲ್ಲ. ಮದುವೆಯಾಗಿ ಕೇವಲ 2 ವರ್ಷದಲ್ಲೇ ಮೇಘನಾ ರಾಜ್ ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಪತಿಯ ನೆನಪಿನಲ್ಲೇ ದಿನ ಕಳೆಯುತ್ತಿದ್ದಾರೆ.

ಪತಿ ಜೊತೆ ಕಳೆದ ಸುಂದರ ನೆನೆಪುಗಳನ್ನು ಮೇಘನಾ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಚಿರು ಸರ್ಜಾ ಪುಣ್ಯಸ್ಮರಣೆ ದಿನ ಮೇಘನಾ ಪತಿ ಜೊತೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೇಘನಾ ಮುಖ ನೋಡಿ ನಗುತ್ತಿರುವ ಚಿರು ಫೋಟೋವನ್ನು ಶೇರ್ ಮಾಡಿ, ನಾವು, ನನ್ನವನು ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ.

ಇನ್ನು ಸರ್ಜಾ ಕುಟುಂಬ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ‘ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ, ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದಿಗೂ ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ಕುಟುಂಬ..’ ಎಂದು ಇಡೀ ಕುಟುಂಬ ಭಾವುಕ ಪತ್ರವನ್ನು ಹಂಚಿಕೊಂಡಿದ್ದಾರೆ.

ಇನ್ನು ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮೇಘನಾ ಮತ್ತು ಸರ್ಜಾ ಕುಟುಂಬ ಚಿರಂಜೀವಿ ಸಮಾಧಿಗೆ ತೆರಳಿ ಪೂಜೆ ನೆರವೇರಿಸಲಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಸರಳವಾಗಿ ಕಾರ್ಯ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಇನ್ನು ವಿಶೇಷ ಎಂದರೆ ಮೊದಲ ಬಾರಿಗೆ ಮೇಘನಾ ಪುತ್ರನನ್ನು ಚಿರು ಸಮಾಧಿ ಬಳಿ ಕರೆದುಕೊಂಡು ಹೋಗುತ್ತಿದ್ದಾರೆ. ತಂದೆಯ ಸಮಾಧಿಗೆ ಜೂ.ಚಿರು ಕೂಡ ಪೂಜೆ ಮಾಡಲಿದ್ದಾರೆ.

ಚಿರು ನಿಧನಹೊಂದಿದಾಗ ಮೇಘನಾ ಗರ್ಭಿಣಿಯಾಗಿದ್ದರು. ಇದೀಗ ಮಗನ ಪಾಲನೆಯಲ್ಲಿ ಬ್ಯುಸಿಯಾಗಿರುವ ಮೇಘನಾ ಅವರು ಮಗನ ನಗುವಿನಲ್ಲಿ ನೋವು ಮರೆಯುತ್ತ ಜೀವಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: