ಕರ್ನಾಟಕಪ್ರಮುಖ ಸುದ್ದಿ

ಕೆಪಿಸಿಸಿ ಅಧ್ಯಕ್ಷತೆಗಾಗಿ ಮುನಿಯಪ್ಪ, ಪರಂ, ಡಿಕೆಶಿ ಪರ ಲಾಬಿ ಜೋರು : ಸಿಎಂ ವಿರುದ್ಧ ದೂರು

ನವದೆಹಲಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ – ಕೆಪಿಸಿಸಿ ಗೆ ಹೊಸ ಅಧ್ಯಕ್ಷರನ್ನು ನೇಮಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹೈಕಮಾಂಡ್ ಗೆ ದೂರು ನೀಡಲಾಗಿದೆ.

ಸಂಸದ ಚಂದ್ರಪ್ಪ ನೇತೃತ್ವದಲ್ಲಿ ಹೈಕಮಾಂಡ್ ಭೇಟಿ ಮಾಡಿದ ಶಾಸಕರ ನಿಯೋಗವು ಕೆ.ಎಚ್  ಮುನಿಯಪ್ಪ ಅವರನ್ನ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿದೆ.  ಎಂ.ಬಿ ಪಾಟೀಲ್ ಅವರನ್ನು ಮಾಡುವುದರಿಂದ ಕಾಂಗ್ರೆಸ್ ಗೆ ಹೆಚ್ಚು ಲಾಭವಿಲ್ಲ. ದಲಿತರೊಬ್ಬರನ್ನ ನೇಮಕ ಮಾಡಿದ್ರೆ ಚುನಾವಣೆಯಲ್ಲಿ ಲಾಭ ಆಗುವ ಸಾಧ್ಯತೆ ಹೆಚ್ಚು ಎಂದು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಚಂದ್ರಪ್ಪ ಮತ್ತು ಅಶೋಕ ಪಟ್ಟಣ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಚಂದ್ರಪ್ಪ ಮತ್ತು ಅಶೋಕ ಪಟ್ಟಣ್ ನೇತೃತ್ವದ ನಿಯೋಗ.
ಪರಮೇಶ್ವರ ಪರ ಬ್ಯಾಟಿಂಗ್ :

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ರಾಜ್ಯದ ಗೃಹಸಚಿವ ಜಿ. ಪರಮೇಶ್ವರ್ ಅವರನ್ನೇ ಮುಂದುವರೆಸುವಂತೆ ಸಂಸದ ಮುದ್ದನುಮೇಗೌಡ ಮತ್ತು ತುಮಕೂರು ಭಾಗದ ಶಾಸಕರು ಒತ್ತಾಯಿಸಿದ್ದಾರೆ.

ಮಧುಗಿರಿ ಶಾಸಕ ರಾಜಣ್ಣ, ಷಡಕ್ಷರಿ ಮತ್ತು ತುಮಕೂರಿನ ರಫೀಕ್ ಅಹಮದ್ ಅವರು ನಿಯೋಗ ತೆರಳಿ ರಾಹುಲ್ ಗಾಂಧಿ ಭೇಟಿ ಮಾಡಿದ ಸಂದರ್ಭ ಈ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಂಸದ ಮುದ್ದನುಮೇಗೌಡ ಅವರು ರಾಹುಲ್ ಗಾಂಧಿ ಅವರನ್ನು ಎರಡು ಬಾರಿ ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ ಪರ ಲಾಬಿ:

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್ ಪರ ಅವರ ಸಹೋದರ ಸುರೇಶ್ ಮತ್ತು ಅವರ ಬೆಂಬಲಿಗರು ಲಾಬಿ ನಡೆಸಲು ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಶತಯಗತಾಯ ಅಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿಯುವ ಮುನ್ಸೂಚನೆ ನೀಡಿದ್ದಾರೆ.

ಹೈಕಮಾಂಡ್ ಗೆ ತಲೆಬಿಸಿ:

ಪಕ್ಷದ ಹೈಕಮಾಂಡ್ ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರ ಇದೀಗ ತಲೆಬಿಸಿ ತಂದೊಡ್ಡಿದೆ. ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟ ಬೆನ್ನಲ್ಲೆ ಅಸಮಾಧಾನ ಭುಗಿಲೆದ್ದಿದ್ದು, ಎಂ.ಬಿ ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡುವುದಕ್ಕೆ ಲಿಂಗಾಯಿತ ಸಮುದಾಯದಿಂದಲೇ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.

ಅಶೋಕ ಪಟ್ಟಣ್ ಅರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

(ಎಸ್.ಎನ್/ಎನ್.ಬಿ.ಎನ್)

Leave a Reply

comments

Related Articles

error: