ಕ್ರೀಡೆಪ್ರಮುಖ ಸುದ್ದಿ

ಐಪಿಎಲ್‌ ಫೈನಲ್‌ ಅಕ್ಟೋಬರ್‌ 15ಕ್ಕೆ ಮುಂದೂಡುವ ಸಾಧ್ಯತೆ

ದೇಶ( ನವದೆಹಲಿ)ಜೂ.8:- ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಂದುವರಿಸಲು ನಿರ್ಧರಿಸಲಾಗಿದ್ದು, ಫೈನಲ್‌ ಪಂದ್ಯವನ್ನು ಅಕ್ಟೋಬರ್‌ 15ಕ್ಕೆ ಮುಂದೂಡುವ ಸಾಧ್ಯತೆಯಿದೆ. .

ಈ ಹಿಂದಿನ ವರದಿಯಂತೆ ಟೂರ್ನಿಯು ಸೆಪ್ಟೆಂಬರ್ 19ರ ಭಾನುವಾರ ಪ್ರಾರಂಭವಾಗಿ, ಫೈನಲ್ ಪಂದ್ಯವನ್ನು ಅಕ್ಟೋಬರ್ 10ಕ್ಕೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗಳು ಟಿ-20 ಟೂರ್ನಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
‘ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಟೂರ್ನಿಯನ್ನು ನಡೆಸುವ ಆಯ್ಕೆಯಿದೆ. ಹತ್ತು ಡಬಲ್ ಹೆಡರ್‌ಗಳನ್ನು (ದಿನದಲ್ಲಿ ಎರಡು ಪಂದ್ಯಗಳು) ನಡೆಸಲು ಬಿಸಿಸಿಐ ಈ ಮೊದಲು ಯೋಚಿಸಿತ್ತು. ಸೆಪ್ಟೆಂಬರ್ ತಿಂಗಳ ಮೂರು ಮತ್ತು ನಾಲ್ಕನೇ ವಾರಗಳಲ್ಲಿ 10 ಮಧ್ಯಾಹ್ನದ ಪಂದ್ಯಗಳನ್ನು ಆಯೋಜಿಸಿದರೆ ಆಟಗಾರರು ದೈಹಿಕವಾಗಿ ಬಳಲಬಹುದು’ ಎಂದು ಬಿಸಿಸಿಐ ಮೂಲಗಳು ಹೇಳಿವೆ.

‘ಅಕ್ಟೋಬರ್ 15 ಶುಕ್ರವಾರ ಭಾರತ ಮತ್ತು ದುಬೈನಲ್ಲಿ ವಾರಾಂತ್ಯದ ಪ್ರಾರಂಭವಾಗಿದೆ. ಇದು ರಜಾದಿನ ಕೂಡ. ಹೀಗಾಗಿ ಪಂದ್ಯವನ್ನು ಆಸ್ವಾದಿಸಲು ಅಭಿಮಾನಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಡಬಲ್ ಹೆಡರ್‌ಗಳ ಸಂಖ್ಯೆಯನ್ನು 10ರ ಬದಲು ಐದು ಅಥವಾ ಆರಕ್ಕೆ ಇಳಿಸಬಹುದು’ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: