ಪ್ರಮುಖ ಸುದ್ದಿವಿದೇಶ

ಲಸಿಕೆ ಹಾಕುವ ಪ್ರಕ್ರಿಯೆ ಶೇ.80ರಷ್ಟು ಪೂರ್ಣಗೊಂಡರೆ ರೂಪಾಂತರ ಕೊರೊನಾ ಅಪಾಯದಿಂದ ರಕ್ಷಣೆ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ,ಜೂ.8-ಕೋವಿಡ್‌ -19 ಲಸಿಕೆ ಹಾಕುವ ಪ್ರಕ್ರಿಯೆ ಕನಿಷ್ಠ ಶೇ.80ರಷ್ಟಾದರೂ ಪೂರ್ಣಗೊಂಡರೆ, ರೂಪಾಂತರ ಕೊರೊನಾ ಸೋಂಕಿನಿಂದ ದಿಢೀರನೆ ಉಂಟಾಗುತ್ತಿರುವ ಅಪಾಯವನ್ನು ತಪ್ಪಿಸಲು ಸಾಧ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತಮಟ್ಟದ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ.ಮೈಕೆಲ್ ರಯಾನ್, ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಇರುವ ಮಾರ್ಗವೆಂದರೆ ದೊಡ್ಡ ಪ್ರಮಾಣದಲ್ಲಿ ಹಾಗೂ ವೇಗವಾಗಿ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಬೃಹತ್‌ ಪ್ರಮಾಣದಲ್ಲಿ ಲಸಿಕೆ ಅಭಿಯಾನ ಮಾಡಿದ್ದರಿಂದ ಅಲ್ಲಿ ಪ್ರಕರಣಗಳ ಸಂಖ್ಯೆ ಬಹಳವಾಗಿ ಕಡಿಮೆಯಾಯಿತು. ಇತ್ತೀಚಿನ ದಿನಗಳಲ್ಲಿ ಈ ದೇಶದಲ್ಲಿ ಡೆಲ್ಟಾ ರೂಪಾಂತರ ವೈರಸ್‌ ಪ್ರಕರಣಗಳು ಕಂಡುಬಂದಿವೆ. ಇದು ಮೂಲತಃ ಭಾರತದಲ್ಲಿ ಕಾಣಿಸಿಕೊಂಡಿರುವ ವೈರಸ್‌.

ವಿಶ್ವದಾದ್ಯಂತ ಎಷ್ಟು ಪ್ರಮಾಣದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ದತ್ತಾಂಶಗಳು ಪೂರ್ಣ ಪ್ರಮಾಣದಲ್ಲಿ ನಿಖರವಾಗಿ ಲಭ್ಯವಾಗಿಲ್ಲ ಎಂದು ಒಪ್ಪಿಕೊಂಡಿರುವ ರಿಯಾನ್, ಆದರೆ, ಲಸಿಕೆ ಹಾಕುವುದರಿಂದ ಖಂಡಿತವಾಗಿಯೂ ಶೇ.80ರಷ್ಟು ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗದಿಂದ ಪಾರಾಗಬಹುದು ಎಂದು ಹೇಳಿದ್ದಾರೆ.

ಆದ್ದರಿಂದ ಸುರಕ್ಷಿತ ಮಟ್ಟದಲ್ಲಿರಲು ಸಾಕಷ್ಟು ಹೆಚ್ಚಿನ ಪ್ರಮಾಣದ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ ಅವರು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: