ಕರ್ನಾಟಕಪ್ರಮುಖ ಸುದ್ದಿ

ಸಿಡಿ ಪ್ರಕರಣ: ಸರ್ಕಾರ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿಂದ ನೋಟಿಸ್ ಜಾರಿ

ಬೆಂಗಳೂರು,ಜೂ.9-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರಕ್ಕೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ಎಸ್‌ಐಟಿ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಸಂತ್ರಸ್ತ ಯುವತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಜಾರಕಿಹೊಳಿ ವಿಚಾರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂತ್ರಸ್ತ ಯುವತಿ, ಅತ್ಯಾಚಾರ ಪ್ರಕರಣದ ಆರೋಪಿ ಜಾರಕಿಹೊಳಿಯನ್ನು ಎಸ್‌ಐಟಿ ಅಧಿಕಾರಿಗಳು ಸರಿಯಾಗಿ ವಿಚಾರಣೆ ನಡೆಸಿಲ್ಲ. ಜಾರಕಿಹೊಳಿ ರಕ್ತದ ಮಾದರಿ, ಕೂದಲು ಪರೀಕ್ಷೆ ನಡೆಸಿಲ್ಲ. ನ್ಯಾಯ ಸಹಮತವಾಗಿ ವೈದ್ಯಕೀಯ ಪರೀಕ್ಷೆ ನಡೆಸದೇ ಕೇವಲ ನೆಪಕ್ಕೆ ಮಾತ್ರ ಬಿಪಿ, ಶುಗರ್ ಪರಿಶೀಲನೆ ಮಾಡಿ ಕಳುಹಿಸಿದ್ದಾರೆ. ಎಸ್‌ಐಟಿ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ ಮೇಲೆ ಹೋಗಿದ್ದಾರೆ. ಹೀಗಾಗಿ ಎಸ್‌ಐಟಿ ತನಿಖೆ ಬಗ್ಗೆ ಅನುಮಾನಗಳು ಮೂಡಿವೆ. ಹೀಗಾಗಿ ಪ್ರಕರಣವನ್ನು ಸಮರ್ಥ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಸಂತ್ರಸ್ತ ಯುವತಿ ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದಾಳೆ.

ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ಈ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ನೀಡಿ ವಿಚಾರಣೆ ಮುಂದೂಡಲಾಗಿದೆ.

ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೆ ಒಳಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಆ ಸಿಡಿಯಲ್ಲಿರುವುದು ನಾನೇ. ಸಹಮತದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಅದನ್ನು ರೆಕಾರ್ಡ್ ಮಾಡಿಕೊಂಡು ನನ್ನನ್ನು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಜಾರಕಿಹೊಳಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು. ಈ ಮೂಲಕ ಅಶ್ಲೀಲ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದರು. ಇದರ ಬೆನ್ನಲ್ಲೇ ಸಿಡಿ ಮಾಡಿದ್ದಾರೆ ಎನ್ನಲಾದ ಶಂಕಿತರಿಗಾಗಿ ಎಸ್‌ಐಟಿ ತಂಡ ಶೋಧ ಕಾರ್ಯ ನಡೆಸುತ್ತಿತ್ತು. ತನಿಖಾ ಪ್ರಗತಿಯ ವರದಿಯನ್ನು ಕೂಡ ಎಸ್‌ಐಟಿ ಹೈಕೋರ್ಟ್ ಗೆ ಸಲ್ಲಿಸಿತ್ತು. (ಎಂ.ಎನ್)

Leave a Reply

comments

Related Articles

error: