ಮೈಸೂರು

ಹುಲ್ಲಹಳ್ಳಿ ಪೊಲೀಸರ ಯಶಸ್ವೀ ಕಾರ್ಯಾಚರಣೆ : ನಿಗೂಢ ಕೊಲೆಯ ರಹಸ್ಯ ಬಯಲು : ಮೂವರ ಬಂಧನ

ಮೈಸೂರು, ಜೂ.9:- ನಂಜನಗೂಡು ಹುಲ್ಲಹಳ್ಳಿ ಪೊಲೀಸರ ಯಶಸ್ವೀ ಕಾರ್ಯಾಚರಣೆಯಿಂದ ನಿಗೂಢ ಕೊಲೆ ರಹಸ್ಯ ಬಯಲಾಗಿದೆ.
ಮದುವೆ ವಿಚಾರದಲ್ಲಿ  ಸಂಬಂಧಿಯಿಂದಲೇ ಕೊಲೆ ನಡೆದಿದೆ.
ಕೊಲೆ ಸಂಬಂಧ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಶರತ್ ಕುಮಾರ್,ಮಧು ಹಾಗೂ ಮಲ್ಲಿಗಮ್ಮ ಬಂಧಿತ ಆರೋಪಿಗಳಾಗಿದ್ದಾರೆ.
ನಂಜನಗೂಡು ತಾಲೂಕಿನ ಗೌಡರಹುಂಡಿ ಗ್ರಾಮದ ಶಿವರಾಜಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಮೇ 28ರಂದು ಶಿವರಾಜಪ್ಪ ನಾಪತ್ತೆಯಾಗಿದ್ದರು.
ಜೂನ್ 2ರಂದು ಬಿದರಗೂಡು ಗ್ರಾಮದ ರಾಂಪುರ ನಾಲೆ ಬಳಿ ಶಿವರಾಜಪ್ಪ ಮೃತದೇಹ ಪತ್ತೆಯಾಗಿತ್ತು. ಶಿವರಾಜಪ್ಪ ಪುತ್ರ ಪವನ್ ಕುಮಾರ್ ಕೊಲೆ ಶಂಕೆ ವ್ಯಕ್ತಪಡಿಸಿ ಶರತ್ ಕುಮಾರ್ ಹಾಗೂ ಇತರರ ಮೇಲೆ ದೂರು ದಾಖಲಿಸಿದ್ದರು.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿತ್ತು. ಪ್ರಭಾರ ಎಸ್ಸೈ ಚಂದ್ರು ತನಿಖೆ ಕೈಗೊಂಡಿದ್ದರು. ಶರತ್ ಕುಮಾರ್ ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಗೌಡರಹುಂಡಿ ಗ್ರಾಮದ ಮಹಿಳೆ ಮಲ್ಲಿಗಮ್ಮ ಜೊತೆ ಶರತ್ ಕುಮಾರ್ ಗೆ ಕಳೆದ 10 ವರ್ಷಗಳಿಂದ ಅಕ್ರಮ ಸಂಬಂಧ  ಇತ್ತು. ಮಲ್ಲಿಗಮ್ಮ ಮಗಳನ್ನ ಕೊಲೆಯಾದ ಶಿವರಾಜಪ್ಪನ ಮಗ ಪವನ್ ಕುಮಾರ್ ಪ್ರೀತಿಸುತ್ತಿದ್ದರು. ಇಬ್ಬರ ಮದುವೆ ನಿಶ್ಚಯವಾಗಿತ್ತು. ಈ ಮದುವೆ ಮಲ್ಲಿಗಮ್ಮಳಿಗೆ ಇಷ್ಟವಿರಲಿಲ್ಲ. ಹಿರಿಯರ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿದ್ದಳು.
ಮದುವೆಯನ್ನ ತಪ್ಪಿಸುವಂತೆ ಮಲ್ಲಿಗಮ್ಮ ತನ್ನ ಪ್ರಿಯಕರ ಶರತ್ ಕುಮಾರ್ ಮೇಲೆ ಒತ್ತಡ ಹೇರಿದ್ದಳು.ಮದುವೆ ನಿಲ್ಲಿಸದಿದ್ದಲ್ಲಿ ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನೆಲ್ಲಾ ಜೈಲಿಗೆ ಕಳಿಸುವುದಾಗಿ ಹೆದರಿಸಿದ್ದಳು. ಮಲ್ಲಿಗಮ್ಮಳ ಒತ್ತಾಯಕ್ಕೆ ಮಣಿದ ಶರತ್ ಕುಮಾರ್ ಕೊಲೆ ಮಾಡಲು ನಿರ್ಧರಿಸಿದ್ದ.
ಮೇ 28 ರಂದು ಶಿವರಾಜಪ್ಪ ಕೊಲೆ ಮಾಡಿದ ಶರತ್ ಕುಮಾರ್ ಅಹಲ್ಯ ಗ್ರಾಮದ ಮಧು ಎಂಬಾತನ ಸಹಕಾರದಿಂದ ನಾಲೆಗೆ ಎಸೆದಿದ್ದ.ನಿಗೂಢ ಕೊಲೆ ರಹಸ್ಯ ಬಯಲು ಮಾಡುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸ್ಪಿ ರಿಷ್ಯಂತ್,ಎಎಸ್ಪಿ ಶಿವಕುಮಾರ್,ಡಿವೈಎಸ್ಪಿ ಗೋವಿಂದರಾಜು,ವೃತ್ತ ನಿರೀಕ್ಷಕರಾದ ಲಕ್ಷ್ಮಿಕಾಂತ್ ತಳವಾರ್ ಮಾರ್ಗದರ್ಶನದಲ್ಲಿ ಹುಲ್ಲಹಳ್ಳಿ ಪ್ರಭಾರ ಎಸ್ಸೈ ಚಂದ್ರು ತನಿಖೆ ಕೈಗೊಂಡು ಆರೋಪಿಗಳನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ತನಿಖೆಗೆ ಹುಲ್ಲಹಳ್ಳಿ ಠಾಣೆ ಎಸ್ಸೈ ರಾಘವೇಂದ್ರ,ಸಿಬ್ಬಂದಿಗಳಾದ ಪ್ರಶಾಂತ್,ಮನೋಹರ್,ಗುರು,ಮಹೇಂದ್ರ,ನವೀನ್ ಕುಮಾರ್,ಸತೀಶ್,ದೇವರಾಜು ಹಾಗೂ ಗೋಪಾಲ್ ಸಹಕರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: