ಕರ್ನಾಟಕಪ್ರಮುಖ ಸುದ್ದಿ

ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಹಸಿಗಾಯದ ಮೇಲೆ ಬರೆ ಎಳೆದಿದೆ: ಸಿದ್ದರಾಮಯ್ಯ

ಬೆಂಗಳೂರು,ಜೂ.10-ಸಂಕಷ್ಟದ ಕಾಲದಲ್ಲಿ ನೆರವಿಗೆ ಬರಬೇಕಾಗಿದ್ದ ಸರ್ಕಾರ ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಹಸಿಗಾಯದ ಮೇಲೆ ಬರೆ ಎಳೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೂ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿದ್ದು, ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ ಮಾಡಿ ಬರೆ ಎಳೆದಿದೆ. ಪರಿಷ್ಕೃತ ದರ 2021 ಏಪ್ರಿಲ್ 1 ರ ಪೂರ್ವಾನ್ವಯದಿಂದ ಜಾರಿಗೆ ಬರಲಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನ ಉದ್ಯೋಗವಿಲ್ಲದೆ, ಉದ್ಯಮಿಗಳು ಉತ್ಪಾದನೆ ಇಲ್ಲದೆ ಕಷ್ಟ-ನಷ್ಟಕ್ಕೀಡಾಗಿದ್ದಾರೆ. ಪೆಟ್ರೋಲ್-ಡೀಸೆಲ್-ಅಡುಗೆ ಅನಿಲ ಬೆಲೆ ಯದ್ವಾತದ್ವಾ ಹೆಚ್ಚಿಸಲಾಗಿದೆ. ಈ ಕಾಲದಲ್ಲಿ ನೆರವಿಗೆ ಬರಬೇಕಾಗಿದ್ದ ರಾಜ್ಯ ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಹಸಿಗಾಯದ ಮೇಲೆ ಬರೆ ಎಳೆದಿದೆ ಎಂದು ಕಿಡಿಕಾರಿದ್ದಾರೆ.

ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯುತ್ ಸರಬರಾಜು ಕಂಪೆನಿಗಳ ನಷ್ಟ ಕಾರಣ ಎನ್ನುವುದು ಅಪ್ಪಟ ಸುಳ್ಳು. ಈ ನಷ್ಟಕ್ಕೆ ಸರ್ಕಾರದ ಅದಕ್ಷತೆ, ಭ್ರಷ್ಟಾಚಾರ ಮತ್ತು ಕಾರ್ಪೋರೇಟ್ ಕಂಪೆನಿಗಳ ಓಲೈಕೆ ಕಾರಣ. ವಿದ್ಯುತ್ ದರ ಹೆಚ್ಚಳವನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಕಾಂಗ್ರೆಸ್ ಸರ್ಕಾರದ ಕಾಲದ ವಿದ್ಯುತ್ ಕ್ಷೇತ್ರದ ಸುಧಾರಣೆ ಮತ್ತು ಹೊಸ ಯೋಜನೆಗಳಿಂದಾಗಿ ಕರ್ನಾಟಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿತ್ತು. ರಾಜ್ಯದಲ್ಲಿ ಸುಮಾರು 30,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಬಳಕೆ ಆಗುತ್ತಿರುವುದು 8,500 ರಿಂದ 10,000 ಮೆಗಾವ್ಯಾಟ್ ಮಾತ್ರ ಎಂದು ಹೇಳಿದ್ದಾರೆ.

ಒಟ್ಟು ವಿದ್ಯುತ್ ಉತ್ಪಾದನೆಯ ಮೂರನೇ ಎರಡು ಭಾಗದಷ್ಟು ಸೋಲಾರ್ ಮತ್ತು ಗಾಳಿಯ ಮೂಲದಿಂದ ಇಂಧನ ಲಭ್ಯವಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದಾಗಿ ರಾಯಚೂರು ಉಷ್ಣವಿದ್ಯುತ್ ಸ್ಥಾವರದ ಉತ್ಪಾದನೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಹೀಗಿರುವಾಗ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ.

ವಿದ್ಯುತ್ ಲಭ್ಯವಿರುವಾಗ ದರ ಇಳಿಸಿ, ಬಳಕೆಗೆ ಪ್ರೊತ್ಸಾಹ ನೀಡಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ಇದರ ಬದಲಿಗೆ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಯದ್ವಾತದ್ವಾ ಹೆಚ್ಚಿಸಿ ವಿದ್ಯುತ್ ಬಳಕೆದಾರರಿಗೆ ದಂಡ ವಿಧಿಸುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

ವಿದ್ಯುತ್ ಸರಬರಾಜು ಕಂಪೆನಿಗಳ ನಷ್ಟಕ್ಕೆ ರಾಜ್ಯ ಸರ್ಕಾರವೇ ಹೊಣೆ. ಯುನಿಟ್ ಗೆ ಹೆಚ್ಚುವರಿ 50 ಪೈಸೆ ನೀಡಿ ಕೇಂದ್ರ ಸರ್ಕಾರದಿಂದ ಯಾಕೆ ವಿದ್ಯುತ್ ಖರೀದಿಸಬೇಕು? ಇದರಿಂದಾಗುವ  ರೂ. 5-6 ಸಾವಿರ ಕೋಟಿ ನಷ್ಟಕ್ಕೆ ಯಾರು ಹೊಣೆ? ಈ ಪೋಲನ್ನು ನಿಲ್ಲಿಸಿದರೆ ವಿದ್ಯುತ್ ಸರಬರಾಜು ಕಂಪೆನಿಗಳನ್ನು ನಷ್ಟದಿಂದ ಪಾರುಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಅದಾನಿ ಮೊದಲಾದ ಕಾರ್ಪೋರೇಟ್ ಕಂಪನಿಗಳು ಹಾಗೂ ಕೇಂದ್ರದ ಗ್ರಿಡ್ಗಳಿಂದ ರಾಜ್ಯ ಸರ್ಕಾರ 38,594 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಸುತ್ತಿದೆ. ಬಳಕೆ 19,921 ಮಿ. ಯೂನಿಟ್ ಮಾತ್ರ. ಇದಕ್ಕಾಗಿ ರಾಜ್ಯ ರೂ.4388 ಕೋಟಿ ಪಾವತಿಸುತ್ತಿದೆ. ರಾಜ್ಯ ಸರ್ಕಾರ ಕಷ್ಟದಲ್ಲಿರುವ ಜನರಿಂದ ಕಿತ್ತು ಕಾರ್ಪೋರೇಟ್ ಕಂಪೆನಿಗಳನ್ನು ಉದ್ಧಾರ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ವಿದ್ಯುಚ್ಛಕ್ತಿ ಕುರಿತಾದ ಪರಿಣಿತರು, ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಕರೆದು ವಿದ್ಯುಚ್ಛಕ್ತಿ ದರಗಳನ್ನು ಕಡಿಮೆ ಮಾಡುವುದು ಹೇಗೆ ಎಂದು ಸಲಹೆ ಪಡೆಯಬೇಕು. ಅಲ್ಲಿಯವರೆಗೆ ವಿದ್ಯುಚ್ಛಕ್ತಿ ದರಗಳನ್ನು ಹೆಚ್ಚಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: