ಕರ್ನಾಟಕಪ್ರಮುಖ ಸುದ್ದಿ

ದರ ಏರಿಕೆ: ಕೊರೊನಾ ಕಾಲದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಜನರ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯುತ್ತಿದ್ದಾರೆ; ಸಿದ್ದರಾಮಯ್ಯ

ಬೆಂಗಳೂರು,ಜೂ.10-ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಐದು ದಿನಗಳ ಕಾಲ ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ತೈಲ ಬೆಲೆ ಏರಿಕೆ ವಿಚಾರವನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಜೂನ್ 11ರಿಂದ 5 ದಿನಗಳ ಕಾಲ ದೇಶಾದ್ಯಂತ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಲಿದೆ. ನಾಳೆ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸಂದರ್ಭದಲ್ಲಿ ಜನರು ಸುಮ್ಮನಿದ್ದಾರೆ ಎಂದು ಅವರ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಬೆಲೆಯನ್ನು ಏರಿಸುತ್ತಲೇ ಇದ್ದಾರೆ. ಲಾಕ್‌ಡೌನ್ ಮಾಡಿದ್ದಾರೆ ಹೀಗಾಗಿ ಜನರು ಬೀದಿಗೆ ಬಂದು ಪ್ರತಿಭಟನೆ ಮಾಡುವ ಹಾಗಿಲ್ಲ ಎಂದರು.

ವಿದ್ಯುತ್ ಖರೀದಿ ನಿಲ್ಲಿಸಿ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದಲ್ಲಿವೆ. ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಸರ್ಕಾರ ಸಮರ್ಥನೆ ನೀಡಿದೆ. ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಜನರಿಗೆ ಸರಿಯಾಗಿ ಉದ್ಯೋಗವಿಲ್ಲ. ದುಡಿಮೆ ಇಲ್ಲದೇ ಊಟಕ್ಕೆ ಸಹ ತೊಂದರೆಯಾಗಿದೆ. ಇಂತಹ ಸಮಯದಲ್ಲಿ ದರ ಏರಿಕೆ ಮಾಡಿ ಗಾಯದ ಮೇಲೆ ಬರೆ ಹಾಕಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ರಾಜ್ಯ ಸರ್ಕಾರ ನಷ್ಟದ ನೆಪ ಹೇಳುತ್ತಿದೆ. ವಿದ್ಯುತ್ ಉತ್ಪಾದನೆ ಹೆಚ್ಚುತ್ತಿದೆ. ಆದರೆ ಕೇಂದ್ರದಿಂದ ವಿದ್ಯುತ್ ಖರೀದಿ, ಅದಾನಿ ಕಂಪನಿಯಿಂದ ಖರೀದಿಯನ್ನು ನಿಲ್ಲಿಸಿಲ್ಲ. ಮೊದಲು ವಿದ್ಯುತ್ ಖರೀದಿ ನಿಲ್ಲಿಸಿ, ಇಲಾಖೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಅಚ್ಛೇದಿನ್ ಆಯೇಗಾ ಪ್ರಧಾನಿ ನರೇಂದ್ರ ಮೋದಿ ಅಚ್ಛೇದಿನ್ ಆಯೇಗಾ ಎಂದು ಅಧಿಕಾರಕ್ಕೆ ಬಂದರು. ಕಳೆದ ಒಂದು ವರ್ಷದಲ್ಲಿ ಶೇ.30ರಷ್ಟು ಇಂಧನ ಬೆಲೆಯನ್ನು ಏರಿಕೆ ಮಾಡಿದ್ದಾರೆ. ತೈಲ ಬೆಲೆ ಇಷ್ಟು ಏರಿಕೆಯಾಗಿದ್ದು, ಇತಿಹಾಸದಲ್ಲೇ ಮೊದಲು ಎಂದು ಸಿದ್ದರಾಮಯ್ಯ ಟೀಕಿಸಿದರು.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 1 ರೂ. ಬೆಲೆ ಏರಿಸಿದಾಗ ತೀವ್ರವಾಗಿ ವಿರೋಧ ಮಾಡಿದ್ದರು. ಬಿಜೆಪಿಯವರು ರಸ್ತೆಗೆ ಬಂದು ಪ್ರತಿಭಟನೆ ಮಾಡಿದ್ದರು. ಈಗ ಪ್ರತಿನಿತ್ಯ ಬೆಲೆ ಏರಿಕೆಯಾಗುತ್ತಲೇ ಇದೆ. ನಮ್ಮ ರಾಜ್ಯ ಮತ್ತು ಹಲವು ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಡೀಸೆಲ್ ಬೆಲೆ 92 ರೂ. ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತೈಲ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಎಂದು ಹೇಳುತ್ತಾರೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಕೊಟ್ಟರೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2013-14ರಲ್ಲಿ ಡೀಸೆಲ್ ಮೇಲೆ 3.45 ಪೈಸೆ, ಪೆಟ್ರೋಲ್ ಮೇಲೆ 9 ರೂ. ತೆರಿಗೆ ಇತ್ತು. ಇವತ್ತು ಡೀಸೆಲ್ ಮೇಲೆ 31 ರೂ. ಮತ್ತು ಪೆಟ್ರೋಲ್ ಮೇಲೆ 32 ರೂ. ತೆರಿಗೆ ಇದೆ. ತೆರಿಗೆ ಹೆಚ್ಚಳ ಮಾಡಿದ್ದು ಏಕೆ? ಎಂದು ಪಶ್ನಿಸಿದರು.

ಜನರು 100 ರೂ. ಕೊಟ್ಟು ಪೆಟ್ರೋಲ್ ಹಾಕಿಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ತೆರಿಗೆಯೇ 65 ರೂ. ಆಗುತ್ತದೆ. ಇದನ್ನು ಕಡಿಮೆ ಮಾಡಿ, ಲೂಟಿ ಯಾಕೆ ಮಾಡುತ್ತಿದ್ದೀರಿ? ಗ್ರಾಹಕರಿಗೆ ಅನುಕೂಲ ಮಾಡಿಕೊಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

 

Leave a Reply

comments

Related Articles

error: