ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ : ಯಾವುದಕ್ಕೆ ವಿನಾಯಿತಿ ಜೂ.14ರ ನಂತರ ಪ್ರಕಟ : ಸಚಿವ ಎಸ್ ಟಿ ಎಸ್

ಮೈಸೂರು, ಜೂ.10:- ಕೋವಿಡ್-19 ಹರಡದಂತೆ ತಡೆಗಟ್ಟಲು ಸರ್ಕಾರ ಜಾರಿ ಮಾಡಿದ್ದ ಲಾಕ್‌ಡೌನ್ ಕ್ರಮವನ್ನು ಮೈಸೂರಿನಲ್ಲಿ ಜೂನ್ 14 ರಿಂದ ಮತ್ತೊಂದು ವಾರ ಮುಂದುವರಿಯಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಗುರುವಾರ ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶಾಸಕರು ಮತ್ತು ಸಂಸದರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಜೂನ್ 14 ರಿಂದ ಜೂನ್ 21 ರವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಜೂನ್ 14 ರ ನಂತರ ಯಾವ ಕ್ಷೇತ್ರಕ್ಕೆ ವಿನಾಯಿತಿ ನೀಡಬಹುದು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಈ ಮೂವರೂ ಒಂದೇ ಕಾರಿನಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೆ ತೆರಳುತ್ತಿದ್ದಾರೆ. ಈ ಉನ್ನತಾಧಿಕಾರಿಗಳು ಒಟ್ಟಿಗೆ ಜಿಲ್ಲಾ ಪ್ರವಾಸ ಮಾಡಿ ವಾಸ್ತವ ಪರಿಸ್ಥಿತಿಯ ಅಧ್ಯಯನ ಮಾಡುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅನ್‌ಲಾಕ್ ಪ್ರಕ್ರಿಯೆ ಮಾಡಬೇಕಾದರೆ ಶೇ5 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರಬೇಕು. ಮೈಸೂರಿನಲ್ಲಿ ಈಗ ಶೇ. 20 ರಷ್ಟು ಪಾಸಿಟಿವಿಟಿ ರೇಟ್ ಇದೆ. ಸೋಂಕಿನ ಪ್ರಮಾಣವನ್ನು ಶೀಘ್ರದಲ್ಲಿ ಶೇಕಡ 5% ಕ್ಕಿಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಹೇಳಿದರು.

‘ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿ, ಸೋಂಕು ದೃಢಪಟ್ಟ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆಗೆ ದಾಖಲುಮಾಡಿಕೊಳ್ಳಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕ್ರಮೇಣ ಇನ್ನೊಂದು ವಾರದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವ ಭರವಸೆ ಇದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಸಾ.ರಾ. ಮಹೇಶ್, ಎಲ್.ನಾಗೇಂದ್ರ, ಹೆಚ್.ಪಿ.ಮಂಜುನಾಥ್, ಅಶ್ವಿನ್ ಕುಮಾರ್, ಕೆ. ಮಹದೇವ, ಅನಿಲ್ ಚಿಕ್ಕಮಾದು,
ಧರ್ಮಸೇನ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ನೂತನ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳಾದ ಕೋಟೆ ಶಿವಣ್ಣ, ಹೆಚ್‌.ವಿ.ರಾಜೀವ್,  ಫನೀಶ್, ಮಹದೇವಸ್ವಾಮಿ, ಕೃಷ್ಣಪ್ಪಗೌಡ, ಹೇಮಂತ್ ಕುಮಾರ್ ಗೌಡ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್..ಎಚ್)

Leave a Reply

comments

Related Articles

error: