ಮೈಸೂರು

ಅಂಕ ಪಡೆಯುವುದೇ ವಿದ್ಯಾರ್ಥಿಗಳ ಸಾಧನೆಯಾಗಿರಬಾರದು, ಪ್ರತಿಭೆ ಪ್ರದರ್ಶಿಸಬೇಕು : ಪ್ರೊ. ಎಂ. ಕೃಷ್ಣೇಗೌಡ

ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮದರ್ಜೆ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ  ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಹಾಗೂ ರಾಜಶ್ರೀ ಗುರುಪಾದಸ್ವಾಮಿ ಸ್ಮಾರಕ ಚಿನ್ನದ ಪದಕ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂತ ಫಿಲೋಮಿನ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಕೃಷ್ಣೇಗೌಡ ಮಾತನಾಡಿ ವಿದ್ಯಾರ್ಥಿಗಳ ಇಡೀ ಬದುಕು ಕೇವಲ ಅಂಕ ಪಡೆಯುವುದರಲ್ಲೇ ಮುಗಿಯಬಾರದು ಅದಕ್ಕಿಂತಲೂ ಮಿಗಿಲಾದ ಸಾಧನೆ ಮಾಡಿ ಇಡೀ ಜಗತ್ತು ನಮ್ಮತ್ತ ನೋಡುವಂತೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಪಡೆಯುವುದನ್ನೇ ಸಾಧನೆ ಎಂದುಕೊಂಡಿದ್ದಾರೆ. ಆದರೆ ಅಬ್ದುಲ್ ಕಲಾಂ ನಂತಹ ಮಹಾನ್ ಪುರುಷರು ಕೇವಲ ಅಂಕ ಪಡೆದು ಜಗತ್ ವಿಖ್ಯಾತಿ ಪಡೆಯಲಿಲ್ಲ ಅವರಲ್ಲಿದ್ದ ಅದ್ಭುತ ಪ್ರತಿಭೆಯಿಂದ ವಿಶ್ವ ವಿಖ್ಯಾತ ವಿಜ್ಞಾನಿಯಾಗಿ ಮತ್ತು ಭಾರತದ ರಾಷ್ಟ್ರಪತಿಯಾಗಿ  ಸೇವೆ ಸಲ್ಲಿಸಿದರು. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಇಡಿ ಜಗತ್ತು ನಮ್ಮತ್ತ ನೋಡುವಂತೆ ಮಾಡಬೇಕು. ಇತ್ತೀಚೆಗೆ ಹಣ ಸಂಪಾದಿಸಿ ದೊಡ್ಡಮನುಷ್ಯರು ಎನಿಸಿಕೊಳ್ಳುವುದು ಸುಲಭ ಆದರೆ ಮಹಾನ್ ವ್ಯಕ್ತಿ ಎನಿಸಿಕೊಳ್ಳುವುದು ಕಷ್ಟ ಸಾಧ್ಯ, ವಿದ್ಯಾರ್ಥಿಗಳು ದೊಡ್ಡಸ್ತಿಕೆಗಾಗಿ ಓದುವುದಕ್ಕಿಂತ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮಹಾನ್ ವ್ಯಕ್ತಿಗಳಾಗಿ ಎಂದು ಕರೆ ನೀಡಿದರು.

ಇದೇ ಸಂದರ್ಭ ವಿಜ್ಞಾನ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ಲತಾ, ಚೈತ್ರ, ಭವಾನಿ, ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಮಣಿ, ಗಜಗೌರಿ, ಮತ್ತು ದಿವ್ಯ ಎಂಬ ವಿದ್ಯಾರ್ಥಿಗಳಿಗೆ ರಾಜಶ್ರೀ ಗುರುಪಾದಸ್ವಾಮಿ ಸ್ಮಾರಕ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ, ಕೈಗಾರಿಕೊದ್ಯಮಿ ಎಂ. ಜಿ. ಪ್ರಕಾಶ್, ಮತ್ತು ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಶಾರದ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: