ಕರ್ನಾಟಕಪ್ರಮುಖ ಸುದ್ದಿ

ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರೆಂಟಿ : ಸಚಿವ ಡಾ. ಕೆ. ಸುಧಾಕರ್

ರಾಜ್ಯ(ಬೆಂಗಳೂರು)ಜೂ.11:-  ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳು ಅನ್‍ ಲಾಕ್ ಅಗಲಿದ್ದು, ಜನ ಎಚ್ಚರಿಕೆಯಿಂದ ಇರಬೇಕು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರೆಂಟಿ, ಬೆಂಗಳೂರು ನೋಡಿದರೆ ನನಗೂ ಭಯವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಈ ಅನ್‍ ಲಾಕ್‍ ನಿಂದ ಸೋಂಕು ಹೆಚ್ಚಳವಾದರೆ ಮತ್ತೆ ಕಠಿಣ ಕ್ರಮ ಜಾರಿ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಅನ್‍ ಲಾಕ್‍ ನಿಂದ ಸೋಂಕು ಹೆಚ್ಚಾದರೆ ಮತ್ತೆ ಲಾಕ್‍ ಡೌನ್ ಮಾಡುವ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3-4 ತಿಂಗಳಲ್ಲಿ ಎಲ್ಲರಗೂ ಲಸಿಕೆ ಸಿಗುತ್ತೆ. ಅಲ್ಲಿಯವರೆಗೂ ಎಲ್ಲರೂ ಎಚ್ಚರ ವಹಿಸಿ ನಿಯಮ ಪಾಲನೆ ಮಾಡಬೇಕು. ರಾಜ್ಯದಲ್ಲಿ ಕನಿಷ್ಠ ಶೇ. 70 ರಷ್ಟು ಜನಕ್ಕೆ ಲಸಿಕೆ ಹಾಕಿದ ನಂತರ ನಾವು ಮಾಮೂಲಿ ಸ್ಥಿತಿಗೆ ಮರಳಿ ಮೊದಲಿನಂತೆ ಆರಾಮವಾಗಿ ಇರಬಹುದು ಎಂದರು.

ಬೆಂಗಳೂರಿನಲ್ಲಿ ಅನ್‍ ಲಾಕ್‍ ನಿಂದ ಜನ ಸಂಚಾರ ಹೆಚ್ಚಾಗಬಹುದು, ಬೆಂಗಳೂರು ನೋಡಿದರೆ ನನಗೂ ಭಯ ಆಗುತ್ತೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರೆಂಟಿ. ಜನ ಕೋವಿಡ್ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಲಸಿಕೆ ಹಾಕಿಸಿಕೊಳ್ಳುವವರೆಗೂ ಯಾರೂ ಮೈ ಮರೆಯದಂತೆ ಮನವಿ ಮಾಡಿದ ಅವರು, ರಾಜ್ಯದಲ್ಲಿ ಲಾಕ್‍ ಡೌನ್‍ ನಿಂದ ಆರ್ಥಿಕ ನಷ್ಟವುಂಟಾಗಿದೆ. ಹಾಗಾಗಿ, ಕೆಲ ವಿನಾಯಿತಿ ಕೊಡಲಾಗಿದೆ. ಹಾಗಾಗಿ, ಅಳೆದು ತೂಗಿ ಅನ್‍ ಲಾಕ್ ನಿರ್ಧಾರ ಮಾಡಿದ್ದೇವೆ ಎಂದರು. ಶೇ. 10 ಕ್ಕಿಂತ ಹೆಚ್ಚು ಸೋಂಕಿರುವ ಜಿಲ್ಲೆಗಳಲ್ಲಿ ಸೋಂಕು ಕಡಿಮೆ ಮಾಡುವತ್ತ ಗಮನ ಹರಿಸಿದ್ದೇವೆ. ಹೆಚ್ಚು ಹೆಚ್ಚು ಟೆಸ್ಟ್‍ಗಳನ್ನು ಮಾಡಲು ಸೂಚನೆ ನೀಡಲಾಗಿದೆ.

ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೆ ಆ ಗ್ರಾಮವನ್ನೇ ಸೀಲ್‍ ಡೌನ್ ಮಾಡಬೇಕು. ಸೋಂಕಿತ ವ್ಯಕ್ತಿಯನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸುವ ಕೆಲಸವೂ ಆಗಬೇಕು ಎಂದರು. ಸೋಂಕು ಇಳಿಕೆಯಾಗಿದೆ ಎಂದು ಶೇ. 5 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು, ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು ಎಂದು ಅವರು ಹೇಳಿದರು.

ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ

ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ ಅವರು,  ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ, ಇದನ್ನು ಪದೇ ಪದೇ ಹೇಳಿದ್ದೇನೆ. ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸಬೇಡಿ. ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ. ಅಂತಹುದಕ್ಕೆ ಅವಕಾಶವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: