ದೇಶಪ್ರಮುಖ ಸುದ್ದಿ

ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಉಲ್ಟಾ ಹೊಡೆದ ಯೋಗಗುರು ಬಾಬಾ ರಾಮ್ ದೇವ್

ದೇಶ(ನವದೆಹಲಿ)ಜೂ.11:-  ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ತನಗೆ ಕೋವಿಡ್ 19 ಲಸಿಕೆ ಅಗತ್ಯವಿಲ್ಲ ಎಂದು ವೈದ್ಯರು ಹಾಗೂ ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದ ಬಾಬಾ ರಾಮ್ ದೇವ್ ಇದೀಗ ಉಲ್ಟಾ ಹೊಡೆದಿದ್ದಾರೆ.

ತಾನು ಶೀಘ್ರವೇ ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತೇನೆ.  ಅಲ್ಲದೇ ವೈದ್ಯರು ಭೂಮಿಯ ಮೇಲಿನ ದೇವರ ದೂತರು ಎಂದು ಬಣ್ಣಿಸಿದ್ದಾರೆ. ಹರಿದ್ವಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರಾಮ್ ದೇವ್ ಇತ್ತೀಚೆಗಷ್ಟೇ ಕೋವಿಡ್ 19 ಹಾಗೂ ಅಲೋಪಥಿ ಔಷಧಿಗಳ ಪರಿಣಾಮದ ಕುರಿತು ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿದ್ದರು.

ಇದು ಐಎಂಎ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕೋಟ್ಯಂತರ ರೂಪಾಯಿ ಮಾನನಷ್ಟ ಮೊಕದ್ದಮೆಯ ನೋಟಿಸ್ ಜಾರಿಗೊಳಿಸಿತ್ತು. ಆದರೂ ಕ್ಷಮೆಯಾಚಿಸದ ಬಾಬಾರಾಮ್ ದೇವ್ ತನ್ನನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದರು.

ಏತನ್ಮಧ್ಯೆ ಜೂನ್ 21ರಿಂದ ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ಸ್ವಾಗತಿಸಿರುವ ಬಾಬಾ ರಾಮ್ ದೇವ್, ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕೊಂಡಾಡಿದ್ದು, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಲಸಿಕೆಯ ಎರಡು ಡೋಸ್ ಗಳನ್ನು ಪಡೆಯಿರಿ ಮತ್ತು ಯೋಗ ಮತ್ತು ಆಯುರ್ವೇದದಿಂದ ದುಪ್ಪಟ್ಟು ರಕ್ಷಣೆ ದೊರೆಯಲಿದೆ. ಹೀಗೆ ಲಸಿಕೆ, ಯೋಗ ಮತ್ತು ಆಯುರ್ವೇದ ಚಿಕಿತ್ಸೆಯಿಂದ ಹೆಚ್ಚಿನ ರಕ್ಷಣೆ ಪಡೆಯುವ ಮೂಲಕ ಕೋವಿಡ್ ನಿಂದ ಒಬ್ಬ ವ್ಯಕ್ತಿಯೂ ಸಾಯುವುದಿಲ್ಲ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: