ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ ಮಾಡಿದ ಶಾಸಕ ರೇಣುಕಾರ್ಯ: ಕೇಸ್ ದಾಖಲಿಸಲು ಮುಂದಾದ ತಹಸಿಲ್ದಾರ್

ದಾವಣಗೆರೆ,ಜೂ.12-ನಿಯಮ ಮೀರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲು ತಹಸಿಲ್ದಾರ್ ಮುಂದಾಗಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ನಿನ್ನೆ ರೇಣುಕಾಚಾರ್ಯ ದಂಪತಿ ಹೋಮ ಮಾಡಿದ್ದಾರೆ.

ಪ್ರಕರಣ ದಾಖಲಿಸಲು ಮುಂದಾಗಿರುವ ತಾಲ್ಲೂಕು ಆಡಳಿತದ ವಿರುದ್ಧ ಕೋವಿಡ್ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಸಿಲ್ದಾರರ ವಿರುದ್ಧ ಘೋಷಣೆ ಕೂಗಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಅವರು ಬರುವವರೆಗೆ ಉಪಹಾರ ಸೇವಿಸುವುದಿಲ್ಲ ಎಂದು ಧರಣಿ ಕುಳಿತರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ನಮಗೆಲ್ಲ ಒಳ್ಳೆಯ ತಿಂಡಿ, ಊಟ, ಉತ್ತಮ ವಾತಾವರಣ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕ ರೇಣುಕಾಚಾರ್ಯ ಸಹ ಇಲ್ಲೇ ತಂಗಿದ್ದಾರೆ. ಉಸ್ತುವಾರಿಯನ್ನು ಉತ್ತಮವಾಗಿಯೇ ನಿಭಾಯಿಸುತ್ತಿದ್ದಾರೆ. ಇಂಥ ವೇಳೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ನೀಡಿದರು.

ಮಾಜಿ ಶಾಸಕರ ಕುಮ್ಮಕ್ಕಿನಿಂದ ಪ್ರಕರಣ ದಾಖಲಿಸಲು ತಹಸಿಲ್ದಾರರು ಮುಂದಾಗಿರುವುದು ಖಂಡನೀಯ. ಎಷ್ಟೋ ಕೋವಿಡ್ ಕೇರ್ ಸೆಂಟರ್‌ನಲ್ಲಿ ಉತ್ತಮ ಸೌಲಭ್ಯ ಇಲ್ಲ. ಅಲ್ಲಿ ಹೋಗಿ ಸರಿಪಡಿಸುವುದನ್ನು ಬಿಟ್ಟು ಉತ್ತಮ ಕಾರ್ಯ ಮಾಡುತ್ತಿರುವ ಜಾಗಕ್ಕೆ ಬಂದು ಯಾಕೆ ತೊಂದರೆ ಕೊಡುತ್ತೀರಾ ಎಂದು ಪ್ರಶ್ನಿಸಿದರು.

ಇನ್ನು ಹೋಮ ಮಾಡಿಸಿದ್ದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸುವಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಪಟ್ಟುಹಿಡಿದ ಪ್ರಸಂಗವೂ ನಡೆಯಿತು‌.  ತಾಲೂಕು ಆಡಳಿತ, ಸಿಪಿಐ ನನ್ನ ಮೇಲೆ ಕೇಸ್ ಹಾಕಲಿ. ಇಂತ ನೂರಾರು ಪ್ರಕರಣ ಎದುರಿಸಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಬರಲಿ ನೋಡೋಣ, ಬಂಧಿಸಲಿ. ಎಲ್ಲಿಗೆ ಹೋಗುತ್ತೆ ನೋಡೋಣ. ಎಸ್ಪಿ ಅವರು ಬೇಕಾದರೆ ಕೇಸ್ ಹಾಕಲಿ. ಇಲ್ಲಿಗೆ ಬಂದು ಸೋಂಕಿತರ ಯೋಗಕ್ಷೇಮ ವಿಚಾರಿಸಿದ್ದೀರಾ. ನನ್ನ ಕೊನೆಯ ಉಸಿರು ಇರುವವರೆಗೆ ಯಾವ ಅಧಿಕಾರಿಗಳು ಏನೂ ಮಾಡಕ್ಕಾಗಲ್ಲ. ನನ್ನ ಮೇಲೆ ಕೇಸ್ ಹಾಕ್ತೀರಾ. ತಾಕತ್ತಿದ್ದರೆ ಎಸ್ಪಿನೇ ಬಂದು ಕೇಸ್ ಹಾಕಲಿ ನೋಡಿಕೊಳ್ಳುತ್ತೇನೆ. ನನ್ನನ್ನು ಹೆದರಿಸ್ತೀರಾ. ಇದಕ್ಕೆ ಜಗ್ಗುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು. (ಎಂ.ಎನ್)

Leave a Reply

comments

Related Articles

error: