ಕರ್ನಾಟಕಪ್ರಮುಖ ಸುದ್ದಿ

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು : ಕೆ.ಜಿ.ಬೋಪಯ್ಯ

ರಾಜ್ಯ(ಮಡಿಕೇರಿ) ಜೂ.12:-ಕೋವಿಡ್ ೧೯ ಮೂರನೇ ಅಲೆ ಬರದಂತೆ ನೋಡಿಕೊಳ್ಳುವಲ್ಲಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕು. ಆ ದಿಸೆಯಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಮಾಲ್ದಾರೆ ಬಳಿಯ ಚೆನ್ನಂಗಿ‌ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ, ಆದ್ದರಿಂದ ತಪ್ಪು ಕಲ್ಪನೆಯಿಂದ ಆದಿವಾಸಿ ಜನರು ಹೊರಬರಬೇಕು. ಚೆನ್ನಂಗಿ ಬಸವನಹಳ್ಳಿ ವ್ಯಾಪ್ತಿಯಲ್ಲಿ 255 ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ, ಆ ದಿಸೆಯಲ್ಲಿ ವಿರಾಜಪೇಟೆ ತಾಲ್ಲೂಕಿನ ಎಲ್ಲಾ ಹಾಡಿಗಳಲ್ಲಿ ಕೊರೊನಾ ಮುಕ್ತ ಮಾಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ಕೋರಿದರು.
ಕೋವಿಡ್ 19 ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ‌ ಆಗಾಗ ಕೈತೊಳೆದುಕೊಳ್ಳಬೇಕು ಎಂದು ಶಾಸಕರು ಸಲಹೆ ಮಾಡಿದರು.
ಜ್ವರ, ಕೆಮ್ಮು, ನೆಗಡಿ, ಮೈಕೈನೋವು ಹೀಗೆ ಹಲವು ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ತೆರಳಿ ವೈದ್ಯರನ್ನು ಭೇಟಿ ಮಾಡಬೇಕು ಎಂದರು.
ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಹಿಂದೆ ಆದಿವಾಸಿಗಳು ಸ್ಥಳೀಯವಾಗಿ ದೊರೆಯುವ ಗೆಡ್ಡೆಗೆಣಸು ಉಪಯೋಗಿಸಿ ಗಟ್ಟಿಯಾಗಿದ್ದರೂ, ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಲಸಿಕೆ ಪಡೆಯಬೇಕು ಎಂದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಮುಕ್ತವಾಗಬೇಕು.
ಚೆನ್ನಂಗಿ ಬಸವನಹಳ್ಳಿ ಭಾಗದಲ್ಲಿನ ಆದಿವಾಸಿ ಜನರಿಗೆ ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಲಾಗಿದ್ದು, ಸದ್ಯದಲ್ಲಿಯೇ ಆರ್ ಟಿ ಸಿ ನೀಡಲಾಗುವುದು. ಜೊತೆಗೆ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವಲ್ಲಿ ಶಾಸಕರು ಮುಂದಾಗಿದ್ದಾರೆ ಎಂದರು.
ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯ ಹಾಗೂ ಆದಿವಾಸಿ ಮುಖಂಡರಾದ ಜೆ.ಕೆ.ಅಪ್ಪಾಜಿ ಅವರು ಮಾತನಾಡಿ ಶಾಸಕರಾದ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಎಲ್ಲಾ ಹಾಡಿಯ ಆದಿವಾದಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಎರಡು ತಾಲ್ಲೂಕಿನ ಎಲ್ಲಾ ಹಾಡಿಗಳಿಗೆ ಶಾಸಕರು ಭೇಟಿ ನೀಡಿ ಆದಿವಾಸಿ ಜನರನ್ನು ಮನವೊಲಿಸಿ ಲಸಿಕೆ ಕೊಡಿಸುತ್ತಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಅಪ್ಪಾಜಿ ಅವರು ನುಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಮದ್ಯಪಾನ ಮಾಡುವುದನ್ನು ಬಿಡಬೇಕಾಗುತ್ತದೆ ಎಂಬ ಮನೋಭಾವ ಆದಿವಾಸಿ ಜನರಲ್ಲಿದೆ. ಇದು ಹೋಗಬೇಕು. ಆದಿವಾಸಿ ಜನರ ಜೀವ ಮತ್ತು ಜೀವನ ಅತಿ ಮುಖ್ಯ, ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅವರು ಕೋರಿದರು.
ಐಟಿಡಿಪಿ ತಾಲ್ಲೂಕು ಅಧಿಕಾರಿ ಗುರುಶಾಂತಪ್ಪ ಅವರು ಮಾಹಿತಿ ನೀಡಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ 79 ಹಾಡಿಗಳಿದ್ದು, 38 ಸಾವಿರ ಆದಿವಾಸಿ ಜನರಿದ್ದಾರೆ. 7 ಸಾವಿರ ಗಿರಿಜನ ಕುಟುಂಬಗಳಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದ್ದು, ಈಗಾಗಲೇ 29 ಹಾಡಿಯ 600 ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಚೆನ್ನಯ್ಯನಕೋಟೆ ಗ್ರಾ.ಪಂ.ಅಧ್ಯಕ್ಷರಾದ ಗಾಯತ್ರಿ, ಸದಸ್ಯರಾದ ಅರುಣ್ ಕುಮಾರ್, ರತನ್, ವಿಜು, ರಾಜು, ತಹಶಿಲ್ದಾರರಾದ ಯೋಗಾನಂದ, ತಾ.ಪಂ.ಇಒ ಅಪ್ಪಣ್ಣ, ಐಟಿಡಿಪಿ ಇಲಾಖೆ ಜಿಲ್ಲಾ ಅಧಿಕಾರಿ ಶಿವಕುಮಾರ್, ತಾಲ್ಲೂಕು ಆರೋಗ್ಯಧಿಕಾರಿ ಡಾ.ಯತಿರಾಜು, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್, ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್, ವೈದ್ಯಾಧಿಕಾರಿಗಳು, ಆದಿವಾಸಿ ಮುಖಂಡರು ಇತರರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: