ಕರ್ನಾಟಕ

ದೇವದುರ್ಗದಲ್ಲಿ ಸಾಲಕ್ಕಾಗಿ ಜಮೀನು ಜಪ್ತಿಗೆ ಬ್ಯಾಂಕ್‍ನಿಂದ ಆದೇಶ : ರೈತನ ಕುಟುಂಬ ಕಂಗಾಲು

ರಾಯಚೂರು: ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದರೂ ಬ್ಯಾಂಕ್ ಅಧಿಕಾರಿಗಳು ಬಲವಂತದ ಸಾಲ ವಸೂಲಾತಿಗಾಗಿ ರೈತರ ಜಮೀನು ಜಪ್ತಿ ಮಾಡಲು ಮುಂದಾಗಿದ್ದು ರೈತನ ಕುಟುಂಬ ಕಂಗಾಲಾಗುವಂತೆ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಆರೋಪಿಸಿದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನವರು ರೈತರಿಗೆ ನೀಡಿದ ಜಪ್ತಿ ಆದೇಶ ಪ್ರತಿ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಯಾಂಕ್‍ಗಳಿಗೆ ಒತ್ತಾಯದ ಸಾಲ ವಸೂಲಾತಿ ಮಾಡದಂತೆ ಆದೇಶ ನೀಡಿದರೂ ಅಧಿಕಾರಿಗಳು ಮಾತ್ರ ಆದೇಶವನ್ನು ಧಿಕ್ಕರಿಸಿ ಜಮೀನು ಹರಾಜಿಗೆ ಮುಂದಾಗಿದ್ದಾರೆ ಎಂದು ದೂರಿದರು.

ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ರೈತ ದೊಡ್ಡ ವಿರುಪಾಕ್ಷಪ್ಪ ಎಂಬ ರೈತ 2006 ರಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಿಂದ 5 ಲಕ್ಷ ರು. ಪೈಪಲೈನ್ ಅಳವಡಿಕೆ ಸಾಲ ಪಡೆದಿದ್ದ ರೈತನಿಗೆ ಸಾಲ ಮರು ಪಾವತಿಯಾಗದೇ ಇರುವ ಕಾರಣ ಬ್ಯಾಂಕ್ ಅಧಿಕಾರಿಗಳು ಜಮೀನು ಜಪ್ತಿ ಆದೇಶವನ್ನು ಹಿಡಿದುಕೊಂಡು ಜಮೀನು ಹರಾಜು ಹಾಕುವುದಾಗಿ ಹೇಳುತ್ತಿದ್ದಾರೆ ಎಂದರು.

ಸತತ ಬರಗಾಲದಿಂದ ಕಂಗೆಟ್ಟಿರುವ ರೈತ ಸಮೂಹವನ್ನು ಬ್ಯಾಂಕ್ ಅಧಿಕಾರಿಗಳು ಲೇವಡಿ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆದೇಶವೇ ಪಾಲನೆಯಾಗದೇ ಹೋದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಕಾಂಗ್ರೆಸ್ ಶಾಸಕರುಗಳು ಮುಂದೆ ಬಂದು ರೈತರ ಹಿತಕಾಪಾಡಬೇಕಾಗಿದೆ. ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ ದೊಡ್ಡ ವಿರುಪಾಕ್ಷಪ್ಪ ಎಂಬ ರೈತ ಪಡೆದ ಸಾಲ 5 ಲಕ್ಷವಾರೂ ಬಡ್ಡಿ ಸೇರಿ 24 ಲಕ್ಷ 41 ಸಾವಿರ ರು. ಸಾಲವೆಂದು ನಮೂದಿಸಲಾಗಿದೆ. ಸಾಲ ಪಡೆದಿದ್ದಕ್ಕಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬ್ಯಾಂಕ್‍ಗಳಿಗೆ ಯಾರು ಕೇಳುವವರೇ ಇಲ್ಲವೇ ಎಂದು ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಭೀಮೇಶ್ವರಾವ್, ಬೂದೆಯ್ಯಸ್ವಾಮಿ, ವೆಂಕಪ್ಪ ಕಾರಬಾರಿ, ಹುಲಿಗೆಪ್ಪ ಜಾಲಿಬೆಂಚಿ, ಶಿವನಗೌಡ ಹೂವಿನಹೆಡಗಿ, ಮಲ್ಲನಗೌಡ ಇದ್ದರು.

Leave a Reply

comments

Related Articles

error: