ಪ್ರಮುಖ ಸುದ್ದಿಮೈಸೂರು

ಸುತ್ತೂರು ಶ್ರೀಗಳ ಮಾತೃಶ್ರೀ ಶಿವನಾಗಮ್ಮ ಲಿಂಗೈಕ್ಯ : ಸಚಿವ ಎಸ್.ಟಿ.ಎಸ್.ಸಂತಾಪ

ಮೈಸೂರು,ಜೂ.14:- ಸುತ್ತೂರು  ಶಿವರಾತ್ರಿ   ದೇಶಿಕೇಂದ್ರ ಸ್ವಾಮೀಜಿಗಳ ಪೂರ್ವಶ್ರಮದ ಮಾತೃಶ್ರೀ ಗಳಾದ   ಶಿವ ನಾಗಮ್ಮನವರು ಇಂದು ಲಿಂಗೈಕ್ಯ ರಾಗಿರುತ್ತಾರೆ.

ಸುತ್ತೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸುತ್ತೂರು ಶ್ರೀಗಳ ಪೂರ್ವಶ್ರಮದ ಮಾತೃಶ್ರೀಯವರಾದ    ಶಿವನಾಗಮ್ಮನವರು  ಲಿಂಗೈಕ್ಯರಾದದ್ದು ತುಂಬಾ ನೋವಿನ ಸಂಗತಿ.

ಸುಮಾರು 90 ವರ್ಷಗಳು ಸಾರ್ಥಕವಾಗಿ ಬದುಕಿ ಬಾಳಿದವರು ಅವರು. ವಕೀಲರಾಗಿದ್ದ ದಿವಂಗತ ಎಸ್.ಎಂ. ಪ್ರಭುಸ್ವಾಮಿಯವರ ಶ್ರೀಮತಿಯಾಗಿ ತಮ್ಮ 6 ಜನ ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟು ಸಮಾಜಕ್ಕೆ ಆಸ್ತಿಯಾಗಿ ಬೆಳೆಸಿದರು.

ಶಿವನಾಗಮ್ಮ ಅವರ ಮಕ್ಕಳಾದ ಎಸ್.ಪಿ.ಶಶಿಕಲಾ ಅವರು.  ಸುತ್ತೂರು ಶ್ರೀಗಳಾದ   ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ರವರು ಐ‌.ಎ.ಎಸ್. ಅಧಿಕಾರಿಗಳಾದ ಷಡಕ್ಷರಸ್ವಾಮಿ ಅವರು, ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್ ಅವರು, ಪ್ರೊ. ಎಸ್.ಪಿ.ಉಮಾದೇವಿ ಅವರು, ಹಾಗೂ ಉದಯ ಶಂಕರ್ ಅವರು ಸಮಾಜಕ್ಕೆ ಬಹುದೊಡ್ಡ ಆಸ್ತಿಯಾಗಿ ಎಲ್ಲರೂ ತಮ್ಮದೇ ಯಾದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ಮಹಾತಾಯಿ   ಶಿವನಾಗಮ್ಮ ಅವರ ಲಿಂಗೈಕ್ಯದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಸುತ್ತೂರು ಮಠ ಶ್ರೀಗಳ ಮಾತೃ ವಿಯೋಗಕ್ಕೆ ಡಿ.ಕೆ. ಶಿವಕುಮಾರ್ ತೀವ್ರ  ಸಂತಾಪ

ಸುತ್ತೂರು ಮಠದ ಶ್ರೀಗಳ ಮಾತೃ ವಿಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

‘ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀಯವರಾದ   ಶಿವನಾಗಮ್ಮ ಅವರು ಲಿಂಗೈಕ್ಯರಾಗಿರುವ ಸುದ್ದಿ ಕೇಳಿ ಬಹಳ ಬೇಸರವಾಗಿದೆ. 90 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿದ ಶಿವನಾಗಮ್ಮ ಅವರು ತಮ್ಮ ಆರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಟ್ಟು ಸಮಾಜದ ಆಸ್ತಿಯಾಗಿ ಬೆಳೆಸಿದ ಮಹಾನ್ ಮಾತೆ. ಸುತ್ತೂರು ಶ್ರೀಗಳಂತೂ ಈ ಸಮಾಜದ ಬೆಳಕಿನಕಿಂಡಿ ಆಗಿದ್ದಾರೆ.

ಮಾತೃಶ್ರೀ ಶಿವನಾಗಮ್ಮನವರ ಲಿಂಗೈಕ್ಯದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧು-ಬಳಗದವರು, ಅನುಯಾಯಿಗಳಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಡಿ.ಕೆ. ಶಿವಕುಮಾರ್ ಅವರು  ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

ಜಿ.ಡಿ.ಹರೀಶ್ ಗೌಡ ಸಂತಾಪ

ಮೈಸೂರಿನ ಸುತ್ತೂರು ಮಠದ   ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಪೂರ್ವಾಶ್ರಮದ ಮಾತೃಶ್ರೀ  ಶಿವನಾಗಮ್ಮ ಲಿಂಗೈಕ್ಯರಾಗಿದ್ದು ಬಹಳ ಬೇಸರದ ಸಂಗತಿ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಸಂತಾಪ್ ವ್ಯಕ್ತಪಡಿಸಿದ್ದಾರೆ.

ಸುತ್ತೂರು ಶ್ರೀಗಳು ಶಿಕ್ಷಣ, ಅನ್ನದಾಸೋಹ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗೆ ಶಿವವನಾಗಮ್ಮ ಅವರ ಮಾರ್ಗದರ್ಶನ ಕಾರಣವಾಗಿತ್ತು.

ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು, ಶ್ರೀಗಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದ ಅಪರೂಪದ ಮಹಾನ್ ತಾಯಿ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: