ಕರ್ನಾಟಕಪ್ರಮುಖ ಸುದ್ದಿ

ಫಸಲ್ ಭೀಮ ಯೋಜನೆ ಹೆಸರು ನೋಂದಾಯಿಸಿ

ರಾಜ್ಯ(ಮಡಿಕೇರಿ) ಜೂ.15:- ಕೇಂದ್ರ ಸರ್ಕಾರವು 2020-21 ನೇ ಸಾಲಿನಿಂದ ಕೆಲವೊಂದು ಮಾರ್ಪಡುಗಳೊಂದಿಗೆ ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಯಡಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ.2 ಎಂದು ಪರಿಗಣಿಸಲಾಗಿದೆ.
ಮುಖ್ಯ ಬೆಳೆಗೆ ಯೋಜನೆಯನ್ನು ಗ್ರಾ.ಪಂ.ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿದೆ. ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳೆವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುವುದು. ಬೆಳೆ ವಿಮಾ ನಷ್ಟ ಪರಿಹಾರವನ್ನು ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ಇಂದಿನ 7 ವರ್ಷಗಳ ಇಳುವರಿ ಮಾಹಿತಿಯಲ್ಲಿ ಉತ್ತಮ 5 ವರ್ಷಗಳ ಇಳುವರಿ ಮಾಹಿತಿ ಪರಿಗಣಿಸಿ ಲೆಕ್ಕಹಾಕಲಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ, ಭಾರತಿ ಆಕ್ಸ (Bharathi Axa ) ವಿಮಾ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಲಭ್ಯವಿದ್ದು, ಜುಲೈ 31 ರೊಳಗೆ ಮಳೆಯಾಶ್ರಿತ ಮುಸುಕಿನ ಜೋಳ ಹಾಗೂ ಆಗಸ್ಟ್ 16 ರೊಳಗೆ ಭತ್ತ ಬೆಳೆಗಳಿಗೆ ಈ ಯೋಜನೆಯಡಿ ಅರ್ಜಿಯನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಲ್ಲಿಸಿ ನೊಂದಾಯಿಸಬಹುದಾಗಿದೆ.
ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ ಭತ್ತ (ನೀರಾವರಿ) ಬೆಳೆಗೆ ರೂ. 86,000, ಭತ್ತ (ಮಳೆಯಾಶ್ರಿತ) ಬೆಳೆಗೆ ರೂ. 55,000 ಹಾಗೂ ಮಳೆಯಾಶ್ರಿತ ಮುಸುಕಿನ ಜೋಳ ಬೆಳೆಗೆ ರೂ. 50,000 ಗಳು ವಿಮಾ ಮೊತ್ತವಾಗಿದೆ.
ಹೆಚ್ಚಿನ ಮಾಹಿತಿಗಾಗಿ Bharathi Axa ವಿಮಾ ಕಂಪನಿಯ ಪ್ರತಿನಿಧಿಗಳಾದ ಬೊಳ್ಳಜಿರ ಅಯ್ಯಪ್ಪ ವಿರಾಜಪೇಟೆ ದೂ.ಸಂಖ್ಯೆ 9880778047, ಮಂಜುನಾಥ ಸೋಮವಾರಪೇಟೆ ದೂ.ಸಂಖ್ಯೆ 9448765279, ಶಂಕರ್ ಮಡಿಕೇರಿ ದೂ.ಸಂಖ್ಯೆ 9590928886, ಹೋಬಳಿಯ ರೈತ ಸಂಪರ್ಕ ಕೇಂದ್ರ, ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವುದು. ಈ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಷೇಕ್ ಅವರು ಕೋರಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: