ಮೈಸೂರು

ಲೋಪ್ರೊಫೈಲ್ ಅಧಿಕಾರಿ ಎಂಬ ಮಾತಿಗೆ ಪೂರಕವಾಗಿ ನಡೆದುಕೊಳ್ಳುವ ಮೂಲಕ ಗಮನ ಸೆಳೆದ ಡಿಸಿ ಡಾ.ಬಗಾದಿ ಗೌತಮ್

ಮೈಸೂರು, ಜೂ.15:-   ತಾವೊಬ್ಬ ಲೋಪ್ರೊಫೈಲ್ ಅಧಿಕಾರಿ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆ ಮಾತಿಗೆ ಪೂರಕವೆಂಬಂತೆ ನಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಅಧಿಕಾರದ ಮದದಲ್ಲಿ ದರ್ಪ ತೋರುವ ಬೆರಳೆಣಿಕೆಯ ಅಧಿಕಾರಿಗಳ ನಡುವೆ ಮೈಸೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇತರರಿಗೆ ಮಾದರಿಯಾಗಿದ್ದಾರೆ. ಸರಳತೆ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಜಿಲ್ಲಾಧಿಕಾರಿಗಳು ಸೋಮವಾರ ಕರ್ತವ್ಯದ ಮೇಲೆ ನಂಜನಗೂಡಿಗೆ ಭೇಟಿ ನೀಡಿದ್ದರು. ಈ ವೇಳೆ ನಂಜನಗೂಡಿನ ನಂಜುಂಡೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಆದರೆ ಅವರು ದೇವಾಲಯದ ಒಳಗೆ ಹೋಗದೇ ಹೊರಗಿನಿಂದಲೇ ಶ್ರೀಕಂಠೇಶ್ವರಸ್ವಾಮಿಗೆ ಕೈಮುಗಿದು ನಮಸ್ಕರಿಸಿದರು. ಕೋವಿಡ್ ಲಾಕ್‌ ಡೌನ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರ ಭೇಟಿಗೆ ಅವಕಾಶ ನಿರ್ಬಂಧಿಸಲಾಗಿದೆ. ಆದರೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ದೇವಾಲಯಕ್ಕೆ ಭೇಟಿ ನೀಡಲು ಕಾನೂನಿನಲ್ಲಿ ಅವಕಾಶವಿದ್ದರೂ, ಈ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದ ಡಾ. ಬಗಾದಿ ಗೌತಮ್ ಹೊರಗಿನಿಂದಲೇ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆಗಿದ್ದ ಸ್ಥಳೀಯ ಶಾಸಕ ಹರ್ಷವರ್ಧನ್ ಸೇರಿದಂತೆ ಹಲವು ಅಧಿಕಾರಿಗಳು ಸಹ ಕೋವಿಡ್-19 ನಿಯಮವನ್ನು ಮೀರಿ ದೇವಾಲಯದ ಒಳಗೆ ಹೋಗುವ ಮನಸ್ಸು ಮಾಡಲಿಲ್ಲ.

ಅಧಿಕಾರಕ್ಕೆ ಅಂಟಿಕೊಂಡು ತಮ್ಮದೇ ಹಾದಿಯಲ್ಲಿ ನಡೆಯುವ ಅಧಿಕಾರಿಗಳ ನಡುವೆ ಡಾ. ಬಗಾದಿ ಗೌತಮ್ ಸರಳತೆ ನಿಜಕ್ಕೂ ಮಾದರಿಯಾಗಿದ್ದು, ಸಾರ್ವಜನಿಕರು  ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: