ಕರ್ನಾಟಕಪ್ರಮುಖ ಸುದ್ದಿ

ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ಶೀಟರ್ ರಾಜೀವ್ ಅಲಿಯಾಸ್ ಕರಿಯ ರಾಜೇಶ್ ಬಂಧನ

ಬೆಂಗಳೂರು,ಜೂ.15-ಕನ್ನಡ ಚಿತ್ರರಂಗದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಹತ್ಯೆಗೆ ಸ್ಕೇಚ್ ಹಾಕಿದ್ದ ರೌಡಿ ಶೀಟರ್ ರಾಜೀವ್ ಅಲಿಯಾಸ್ ಕರಿಯ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ನೇಪಾಳ ಬಾರ್ಡರ್ ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕೆ.ಜೆ.ನಗರ ಇನ್ಸ್‌ಪೆಕ್ಟರ್‌ ಚೇತನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ.

ಬಾಂಬೆ ರವಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ರೌಡಿ ರಾಜೇಶ್ ಇದಾಗಲೇ ಇಟ್ಟಮಡು ಡಬ್ಬಲ್ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದಾನೆ. ರೌಡಿ ಬಾಂಬೆ ರವಿ ಜತೆ ಸೇರಿಕೊಂಡಿದ್ದ ಈತ, ಉಮಾಪತಿ ಹತ್ಯೆಗೆ ಸಂಚು ರೂಪಿಸಿದ್ದ. ಬಸವನಗುಡಿ ಮೆಟ್ರೋ ನಿಲ್ದಾಣದ ಬಳಿ ಟೀಟಿಯಲ್ಲಿದ್ದ ಕೆಲ ಆರೋಪಿಗಳನ್ನು ಬಂಧಿಸಿದ್ದ ಇನ್ಸ್ ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು. ಇದೀಗ ರಾಜೀವ್‌ ಸಿಕ್ಕಿಬಿದ್ದಿದ್ದಾನೆ.

ಕಳೆದ ವರ್ಷ ಉಮಾಪತಿ ಶ್ರೀನಿವಾಸ್​ ಗೌಡ ಮತ್ತು ಅವರ ಸಹೋದರ ದೀಪಕ್​ ಅವರ ಹತ್ಯೆಗೆ ಸಂಚುರೂಪಿಸಲಾಗಿತ್ತು. ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ದರೋಡೆ ಮುಂತಾದ ಭೂಗತ ಚಟುವಟಿಕೆಗಳನ್ನು ನಡೆಸಲು ಬಾಂಬೆ ರವಿ ಮತ್ತು ಆತನ ಸಹಚರರು ಪ್ಲ್ಯಾನ್​ ರೂಪಿಸಿದ್ದರು.

ಬೆಂಗಳೂರಿನಿಂದ ಹೊರಗೆ ಇದ್ದುಕೊಂಡು, ನಗರದಲ್ಲಿನ ಹಣವಂತರಿಗೆ ಧಮ್ಕಿ ಹಾಕುತಿದ್ದ ಈ ಗ್ಯಾಂಗ್​ನ ಹಲವರನ್ನು ಈ ಮೊದಲೇ ವಶಕ್ಕೆ ಪಡೆಯಲಾಗಿತ್ತು.

ಘಟನೆ ಕುರಿತಂತೆ ಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಹನ್ನೊಂದು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ತಿಂಗಳಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದ್ದ ದಕ್ಷಿಣ ವಿಭಾಗದ ಪೊಲೀಸರು ಈಗ ರಾಜೇಶ್​ ಅಲಿಯಾಸ್​ ಕರಿಯ ರಾಜೇಶ್​ನ್ನು ಬಂಧಿಸಿದ್ದಾರೆ. ಈ ಹಿಂದೆ ಕೊಲೆಯಾದ ಹಳೆ ರೌಡಿ ಪರಂದಾಮಯ್ಯನ ಜೊತೆ ಇರುತ್ತಿದ್ದ ಕರಿಯ ರಾಜೇಶ್​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. (ಎಂ.ಎನ್)

 

Leave a Reply

comments

Related Articles

error: