ದೇಶಪ್ರಮುಖ ಸುದ್ದಿ

ಹೊಸ ಐಟಿ ನಿಯಮಗಳ ಉಲ್ಲಂಘನೆ: ಭಾರತದಲ್ಲಿ ಮಧ್ಯವರ್ತಿ ವೇದಿಕೆ ಸ್ಥಾನ ಕಳೆದುಕೊಂಡ ಟ್ವಿಟರ್

ನವದೆಹಲಿ,ಜೂ.16-ಹೊಸ ಐಟಿ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಲ್ಲದೆ, ಹೊಸ ಕಾನೂನುಗಳಿಗೆ ಬದ್ಧವಾಗಿರದ ಏಕೈಕ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಎಂದು ಮೂಲಗಳು ತಿಳಿಸಿವೆ.

ಜೂನ್ 9ರಂದು ಸಾಮಾಜಿಕ ಮಾಧ್ಯಮ ಟ್ವಿಟರ್ ಐಟಿ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಒಪ್ಪಂದದ ಆಧಾರದ ಮೇಲೆ ನೋಡಲ್ ವ್ಯಕ್ತಿ(ಎನ್ಸಿಪಿ) ಮತ್ತು ಕುಂದುಕೊರತೆ ಅಧಿಕಾರಿ(ಆರ್ಜಿಒ) ಅವರನ್ನು ನೇಮಕ ಮಾಡಲಾಗಿದೆ. ಇನ್ನು ಮುಖ್ಯ ಅನುಸರಣೆ ಅಧಿಕಾರಿಯ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಟ್ವಿಟರ್ ತಿಳಿಸಿತ್ತು.

ಹೊಸ ಐಟಿ ನಿಯಮಗಳನ್ನು ‘ತಕ್ಷಣ’ ಅನುಸರಿಸುವಂತೆ ಕೇಂದ್ರ ಸರ್ಕಾರವು ಕೊನೆಯ ಅವಕಾಶ ನೀಡಿ ಟ್ವಿಟರ್ ಗೆ ನೋಟಿಸ್ ನೀಡಿತ್ತು. ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಟ್ವೀಟರ್ ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿತ್ತು.

ಹೊಸ ಮಧ್ಯವರ್ತಿ ಮಾರ್ಗಸೂಚಿ ನಿಯಮಗಳು ಮೇ 26ರಿಂದ ಜಾರಿಗೆ ಬಂದಿವೆ ಎಂದು ಸಚಿವಾಲಯ ಪತ್ರದಲ್ಲಿ ತಿಳಿಸಿತ್ತು. ನಿಯಮಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ನಿಬಂಧನೆಗಳು ಈಗಾಗಲೇ ಅಂದರೆ 2021ರ ಮೇ 26ರಿಂದಲೇ ಜಾರಿಗೆ ಬಂದಿವೆ. ಅಲ್ಲದೆ ಟ್ವಿಟರ್ ಗೆ ನೋಟಿಸ್ ನೀಡಿ ವಾರ ಕಳೆದರೂ ಈ ನಿಯಮಗಳ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: