ಮೈಸೂರು

ಕಲಾರಕ್ಷಣೆ” ಯೋಜನೆಯನ್ನು ಜಾರಿಗೆ ತರುವಂತೆ ಮೈಸೂರು ಕಲಾವಿದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಮೈಸೂರು,ಜೂ.16:- ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ರಕ್ಷಣೆಗೆ ಕನ್ನಡ ಸಂಸ್ಕೃತಿ ಇಲಾಖೆ “ಕಲಾರಕ್ಷಣೆ” ಯೋಜನೆಯನ್ನು ಜಾರಿಗೆ ತರುವಂತೆ ಮೈಸೂರು ಕಲಾವಿದರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರಿಗೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಚೆನ್ನಪ್ಪ ಅವರಿಗೆ ಇಂದು ಕರ್ನಾಟಕ ಕಲಾಮಂದಿರ ಆವರಣದಲ್ಲಿ ಮನವಿ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕ ಅಜಯ್ ಶಾಸ್ತ್ರಿ ಮಾತನಾಡಿ ಮೈಸೂರಿನಲ್ಲಿ  ಎರಡು ಸಾವಿರಕ್ಕೂ ಹೆಚ್ಚಿನ ವೃತ್ತಿಪರ ಕಲಾವಿದರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಕಲಾ ಪ್ರಕಾರಗಳ  ಸಾಂಸ್ಕೃತಿಕ ಜನಪದ ನೃತ್ಯ ಪಕ್ಕವಾದ್ಯ ಸುಗಮಸಂಗೀತ ಹಾಡುಗಾರಿಕೆ ಸೇರಿದಂತೆ ಸಾವಿರಾರು ಅರ್ಹ ಬಡಕಲಾವಿದರನ್ನು ಗುರುತಿಸಲು ರಾಜ್ಯ ಸರ್ಕಾರ ಸಮರ್ಪಕ ಕಲಾರಕ್ಷಣೆ ಯೋಜನೆಯನ್ನು ಜಾರಿಗೆ ತರಬೇಕಿದ್ದು, ನೂರಾರು ಕಲಾವಿದರ ಸಮ್ಮುಖದಲ್ಲಿ ಮನವಿಯನ್ನು ಸಚಿವರಿಗೆ  ಸಲ್ಲಿಸಲಾಗುತ್ತಿದೆ ಎಂದರು.

ಕೋವಿಡ್ ಲಾಕ್ ಡೌನ್ ನಿಂದಾಗಿ ಮೈಸೂರು ಜಿಲ್ಲೆಯಲ್ಲಿ ಎರಡು ಸಾವಿರ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಸರ್ಕಾರದಿಂದ ಸಿಗುತ್ತಿರುವ ಸವಲತ್ತುಗಳಾದ ಆರ್ಥಿಕ ಸಹಾಯಧನ, ಆಹಾರ ದಿನಸಿ ಕಿಟ್, ಕಲಾವಿದರಿಗೆ ಕೋವಿಡ್ ಶೀಲ್ಡ್ ಲಸಿಕೆಯನ್ನು  ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸಲು ಕಲಾವಿದರು ಅಧಿಕಾರಿಗಳು ಒಳಗೊಂಡಂತೆ ಜಿಲ್ಲಾಡಳಿತ ಸಮಿತಿ ರಚಿಸಿ ಕ್ರಮಕೈಗೊಳ್ಳುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚಿಸಬೇಕು,

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡಿರುವ ಹಾಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಮೈಸೂರಿನ ವಿವಿಧ ಕಲಾಪ್ರಕಾರದ ಕಲಾವಿದರನ್ನು ಗಣನೆಗೆ ತೆಗೆದುಕೊಂಡು ಕಲಾವಿದರಿಗೆ ಗುರುತಿನ ಚೀಟಿ ( ID card ) ದೃಢೀಕರಣ ಮಾಡಿಕೊಟ್ಟು ಕ್ರಮ ಸಂಖ್ಯೆಯನ್ನು ನೋಂದಣಿ ಮಾಡಿದರೆ   ಕಾರ್ಯಕ್ರಮಗಳಿಗೆ ಕಲಾಪ್ರದರ್ಶನಕ್ಕೆ ಕಲಾವಿದರನ್ನು ನಿಯೋಜನೆ ಮಾಡಬಹುದು ಮತ್ತು ಇಂತಹ ಆರ್ಥಿಕ ಸಂಕಷ್ಟ ಸಮಯದಲ್ಲಿ ಸರ್ಕಾರಿ ಸವಲತ್ತನ್ನು ಸಮರ್ಪಕವಾಗಿ ಕಲಾವಿದರಿಗೆ ತಲುಪಿಸಬಹುದು ಎಂದರು.

ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ಪರಿಹಾರ ಧನವನ್ನು ಪಡೆಯಲು 35 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ನಿಗದಿಪಡಿಸಿದ್ದು ಅದನ್ನು ಕೆಳಗಿನ ಕಲಾವಿದರಿಗೂ ಅಂದರೆ 25ವರ್ಷ ಮೇಲ್ಪಟ್ಟ ಕಲಾವಿದರಿಗೂ ವಯೋಮಿತಿಯನ್ನು ಬದಲಾಯಿಸಿ ಯೋಜನೆ ಜಾರಿಗೆ ಬರುವಂತೆ ಕ್ರಮಕೈಗೊಳ್ಳಬೇಕು.  ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಹ ಕಲಾವಿದರಿಗಾಗಿ ಕಲಾರಕ್ಷಣೆ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂಬ ಬೇಡಿಕೆಯನ್ನು ಸಚಿವರ ಮುಂದೆ ಇರಿಸಿದರು.

ಈ ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಮೈಲಾಕ್ ಅಧ್ಯಕ್ಷರಾದ ಎನ್.ವಿ ಫಣೀಶ್, ಬಿಜೆಪಿ ವಕ್ತಾರ ಮೋಹನ್,   ಕಲಾವಿದರಾದ  ರಾಘವೇಂದ್ರಪ್ರಸಾದ್,  ಗುರುದತ್,  ಗಣೇಶ್ ಭಟ್,  ವಿಶ್ವನಾಥ್, ಕೃಷ್ಣಮೂರ್ತಿ, ರವಿಶಂಕರ್, ಸೌಭಾಗ್ಯ ಪ್ರಭು, ಅಶ್ವಿನಿ ಶಾಸ್ತ್ರಿ,  ರಾಘವೇಂದ್ರ ರತ್ನಾಕರ್, ಪ್ರದೀಪ್ ಕಿಗ್ಗಾಲ್, ಕಂಸಾಳೆ ರವಿ, ಕಿರಣ್,  ಹರೀಶ್ ಪಾಂಡವ  ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: