ಮೈಸೂರು

ಬೀದಿಬದಿ ವ್ಯಾಪಾರಿಗಳಿಗೆ, ನಗರದಲ್ಲಿ ಸುತ್ತಾಡುವ ನಿರ್ಗತಿಕರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಜೂ.16:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋ‌ನಾ ನಿಯಂತ್ರಣಕ್ಕಾಗಿ ಇಂದಿನಿಂದ ನಗರದಲ್ಲಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದೆ.

ಇಂದಿನಿಂದ  ಜೂನ್ 20 ರವರೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಅಭಿಯಾನ ನಡೆಯಲಿದ್ದು, ಬೆಳಿಗ್ಗೆ 10 ರಿಂದ ಸಂಜೆ  4ರವರೆಗೆ ಪುರಭವನದಲ್ಲಿ ಲಸಿಕೆ ಹಾಕಲಾಗುತ್ತಿದ್ದು, ನೋಂದಾಯಿತ ಹಾಗೂ ನೋಂದಾಯಿಸಲ್ಪಡದವರಿಗೂ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಹಾಕಿಸಿಕೊಳ್ಳಲು ಬೀದಿ ಬದಿ ವ್ಯಾಪಾರಿಗಳಿಗೆ ಆಧಾರ್ ಕಾರ್ಡ್ ಹಾಗೂ ವ್ಯಾಪಾರದ ಗುರುತಿನ ಚೀಟಿ, ವಿಶೇಷ ಚೇತನರಿಗೆ ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಲಸಿಕೆ ಪಡೆಯುವ ವೇಳೆ ಬೀದಿ ಬದಿ ವ್ಯಾಪಾರಿಗಳು ಅದನ್ನು ತೋರಿಸಿಯೇ ಲಸಿಕೆ ಪಡೆದರು. ಲಸಿಕೆ ಅಭಿಯಾನ ಹಿನ್ನೆಲೆ ವಾರ್ಡ್ ವಾರು ಉಚಿತ ವಾಹನದ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೆಲವರು ವಾಹನ ಸೌಲಭ್ಯದ ವ್ಯವಸ್ಥೆಯನ್ನು ಬಳಸಿಕೊಂಡರು. ನೂರಾರು ಸಂಖ್ಯೆಯಲ್ಲಿ ಆಗಮಿಸಿ ಲಸಿಕೆಯನ್ನು ಸರತಿಯ ಸಾಲಿನಲ್ಲಿ ನಿಂತು ಲಸಿಕೆಯನ್ನು ಪಡೆದುಕೊಳ್ಳುತ್ತಿರುವುದು ಕಂಡು ಬಂತು.

ಪಾಲಿಕೆ ಆಯುಕ್ತ ರಾದ ಲಕ್ಷ್ಮೀಕಾಂತ್ ರೆಡ್ಡಿ ಜಿ, ಅಧಿಕಾರಿಗಳು ಹಾಗೂ ನಗರಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ವೇಳೆ ಪುರಭವನದಲ್ಲಿ ಸಚಿವ ಎಸ್.ಟಿ.ಸೋಮಶೇಖರ್   ಮೈಸೂರು ನಗರದಲ್ಲಿ ಸುತ್ತಾಡುವ ನಿರ್ಗತಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ   ಚಾಲನೆ ನೀಡಿದರು.

ವಿಶೇಷ ಚೇತನರಿಗೆ ಜೂನ್​ 17 ರಿಂದ 19 ರವರೆಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಿಲಕನಗರದ ಅಂಧಮಕ್ಕಳ‌ ಪಾಠಶಾಲೆಯಲ್ಲಿ ಲಸಿಕೆ ‌ನೀಡಲು ನಿರ್ಧರಿಸಲಾಗಿದೆ. ವಿಶೇಷ ಚೇತನರು ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಬೇಕಿದ್ದು, ವಾರ್ಡ್​ವಾರು ಉಚಿತ ವಾಹನದ ಸೌಲಭ್ಯ ಕೂಡ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ  ಅಧಿಕಾರಿಗಳು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: