ದೇಶಪ್ರಮುಖ ಸುದ್ದಿ

ಕೋವಿಡ್-19 ಅನ್ ಲಾಕ್: ತಾಜ್ ಮಹಲ್ ವೀಕ್ಷಣೆಗೆ ಪ್ರವಾಸಿಗರಿಗೆ ಅನುಮತಿ; ಒಮ್ಮೆಗೆ 650 ಮಂದಿಗೆ ಮಾತ್ರ ಅವಕಾಶ

ಆಗ್ರಾ,ಜೂ.16-ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲಾಗಿದ್ದು, ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ.

ಆದರೆ ಷರತ್ತು ಅನ್ವಯಿಸಲಾಗಿದೆ. ತಾಜ್ ಮಹಲ್ ವೀಕ್ಷಣೆಗೆ ಒಮ್ಮೆಗೆ ಕೇವಲ 650 ಮಂದಿ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆನ್ ಲೈನ್ ನಲ್ಲಿ ಮಾತ್ರವೇ ಟಿಕೆಟ್ ಖರೀದಿಸುವ ಮೂಲಕ, ಭೇಟಿ ನೀಡಬಹುದಾಗಿದೆ.

ಸ್ಮಾರಕದ ಯಾವುದೇ ಭಾಗವನ್ನು ಮುಟ್ಟಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ. ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್​​ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಾಜ್​​ಮಹಲ್​​ಗೆ ಭೇಟಿ ನೀಡುವ ಪ್ರವಾಸಿಗರು ಸ್ಪಂಜಿನಂತಹ ಕಾರ್ಪೆಟ್​ ಮೇಲೆ ಮಾತ್ರ ನಡೆಯಬೇಕು. ಅಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗಿದ್ದು, ಅವರ ಶೂ, ಚಪ್ಪಲಿಗಳು ಸ್ಯಾನಿಟೈಜ್ ಆಗುತ್ತವೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ಕೋವಿಡ್​ ಸೋಂಕು ಪ್ರಸರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆಗ್ರಾದಲ್ಲಿರುವ ಪ್ರೇಮ ಸೌಧ ತಾಜ್​ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಇಂದಿನಿಂದ ಮತ್ತೆ ತೆರೆಯಲಾಗುತ್ತಿದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಸುಮಾರು 2 ತಿಂಗಳ ಬಳಿಕ ಪ್ರವಾಸಿಗರಿಗೆ ತಾಜ್​ಮಹಲ್​ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ತಾಜ್​ಮಹಲ್​ನ್ನು ಕೊರೊನಾ ಕಾರಣದಿಂದಾಗಿ ಎರಡನೇ ಬಾರಿಗೆ ಏಪ್ರಿಲ್​ 4ರಿಂದ ಮುಚ್ಚಲಾಗಿತ್ತು. ಕಳೆದ ವರ್ಷ ಕೂಡ ಕೋವಿಡ್​ ಹೆಚ್ಚಾಗಿದ್ದರಿಂದ ತಾಜ್​ಮಹಲ್​​ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ತಾಜ್​ ಮಹಲ್​ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದೆ.

ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಪ್ರೇಕ್ಷಣೀಯ ಸ್ಥಳಗಳಾದ ಕೆಂಪುಕೋಟೆ, ತಾಜ್​ಮಹಲ್, ಅಜಂತಾ ಗುಹೆ ಸೇರಿದಂತೆ ಎಲ್ಲಾ ಕೇಂದ್ರೀಕೃತ ಸ್ಮಾರಕಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಏಪ್ರಿಲ್​ 15ರಿಂದ ಮುಚ್ಚಲು ಸರ್ಕಾರ ಆದೇಶಿಸಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: