ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೂಚನೆ

ರಾಜ್ಯ(ಚಾಮರಾಜನಗರ), ಜೂ. 16:- ಕೋವಿಡ್-19 ನಿಯಂತ್ರಣ ಮತ್ತು ಇದಕ್ಕೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ತೊಡಗಿಕೊಂಡು ಕಾರ್ಯನಿರ್ವಹಿಸಬೇಕೆಂದು ಪೌರಾಡಳಿತ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬಂಧ ನಡೆದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೋವಿಡ್ ತಡೆ ಕುರಿತು ನಿಯೋಜನೆಯಾಗಿರುವ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಹರಡುವಿಕೆ ತಡೆಯುವ ಕಾರ್ಯ ಅನುಷ್ಠಾನದಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಸಹ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಕೋವಿಡ್ ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಪಾತ್ರವೂ ಅತ್ಯಂತ ಮುಖ್ಯವಾಗಿದೆ ಎಂದರು.
ಮುಂಬರುವ ದಿನಗಳಲ್ಲಿಯೂ ಅತ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸಬೇಕು. ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡಬೇಕು. ಕೋವಿಡ್ ವ್ಯಾಪಿಸದಂತೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆಯಾಗಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಯವರು ನಿರ್ದೇಶನ ನೀಡಿದರು.
ಕೋವಿಡ್ ಲಸಿಕೆ ನೀಡುವ ಕಾರ್ಯವು ಎಲ್ಲಾ ಕಡೆ ಹೆಚ್ಚು ನಡೆಯಬೇಕು. ಆಂದೋಲನ ಮಾದರಿಯಲ್ಲಿ ಲಸಿಕೆ ನೀಡುವ ಕೆಲಸವಾಗಬೇಕು. ಯಾರೊಬ್ಬರೂ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಪ್ರತಿದಿನ ಹೆಚ್ಚು ಜನರಿಗೆ ಲಸಿಕೆ ಪಡೆಯಲು ಅಗತ್ಯ ವ್ಯವಸ್ಥೆ ಮಾಡುವ ಮೂಲಕ ಲಸಿಕಾ ಕಾರ್ಯದಲ್ಲಿ ಪ್ರಗತಿ ಸಾಧನೆ ಮಾಡಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಸಂಭಾವ್ಯ ಕೋವಿಡ್ ಮೂರನೇ ಅಲೆ ವೇಳೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಉಂಟಾಗಬಹುದೆಂಬ ತಜ್ಞರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ವಹಿಸಬೇಕಿರುವ ಮುಂಜಾಗ್ರತಾ ಕ್ರಮಗಳ ಸಂಬಂಧ ಈಗಾಗಲೆ ಸೂಚನೆ ನೀಡಲಾಗಿದೆ. ಆಸ್ಪತ್ರೆ, ಹಾಸಿಗೆಗಳ ಸೌಲಭ್ಯ, ಸೇವಾ ಚಿಕಿತ್ಸೆಗಳ ಬಗ್ಗೆಯೂ ಚರ್ಚಿಸಲಾಗಿದೆ. ಅಗತ್ಯ ವೈದ್ಯಕೀಯ ಪರಿಕರಗಳ ಖರೀದಿಗೂ ನಿರ್ದೇಶನ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹರ್ಷಲ್ ಬೋಯರ್ ನಾರಾಯಣ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಮಹೇಶ್, ಆರ್.ಸಿ.ಹೆಚ್. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಸರ್ವಲೆನ್ಸ್ ಅಧಿಕಾರಿ ಡಾ. ಅಂಕಪ್ಪ, ನೋಡಲ್ ಅಧಿಕಾರಿಗಳಾದ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ. ಸಂತೋಷ್ ಕುಮಾರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಇತರರು ಹಾಜರಿದ್ದರು.
ಇದಕ್ಕೂ ಮೊದಲು ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ. ಕಾವೇರಿ ಅವರು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ತಡೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಚಾಮರಾಜನಗರದಲ್ಲಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಹಿಳೆಯರಿಗಾಗಿಯೇ ಕೋವಿಡ್ ಲಸಿಕೆ ನೀಡಲು ವಿಶೇಷವಾಗಿ ತೆರೆಯಲಾಗಿರುವ ಪಿಂಕ್ ಬೂತ್ ಗೆ ಭೇಟಿ ಕೊಟ್ಟು ವೀಕ್ಷಿಸಿದರು. ನಿರಾಶ್ರಿತರ ಕೇಂದ್ರಕ್ಕೂ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು. ಜಿಲ್ಲಾ ಪಂಚಾಯತ್ ಆಡಳಿತ ಅಧಿಕಾರಿಯೂ ಆಗಿರುವ ಬಿ.ಬಿ. ಕಾವೇರಿ ಅವರು ಮಧ್ಯಾಹ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: