ದೇಶಪ್ರಮುಖ ಸುದ್ದಿ

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಡರ್ ಸ್ಪೆಷಲಿಸ್ಟ್, ಶಿವಸೇನೆ ನಾಯಕನ ಮನೆ ಮೇಲೆ ಎನ್‌ಐಎ ದಾಳಿ

ಮುಂಬೈ,ಜೂ.17-ಉದ್ಯಮಿ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಹಾಗೂ ಉದ್ಯಮಿ ಮನ್ ಸುಖ್ ಹಿರಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್, ಎನ್ಕೌಂಟರ್ ಸ್ಪೆಷಲಿಸ್ಟ್ ಹಾಗೂ ಶಿವಸೇನೆ ನಾಯಕರಾಗಿರುವ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಎನ್ಐಎ ತಂಡ ಇಂದು ಬೆಳಿಗ್ಗೆ ಮುಂಬೈನ ಅಂಧೇರಿ (ಪೂರ್ವ) ಪ್ರದೇಶದಲ್ಲಿರುವ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಈ ವೇಳೆ ಪ್ರದೀಪ್ ಶರ್ಮಾ ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ.

ಮನ್‌ಸುಖ್ ಹಿರೇನ್ ಪ್ರಕರಣದಲ್ಲಿ ಶರ್ಮಾ ಅವರು ಆರೋಪಿಗಳಿಗೆ ಸಹಾಯ ಮಾಡಿರುವ ಕುರಿತು ಸುಳಿವುಗಳು ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ.

ಪ್ರದೀಪ್ ಶರ್ಮಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಈ ಹಿಂದೆ ಎರಡು ಬಾರಿ ಪ್ರಶ್ನಿಸಿದ್ದರು. ಅವರು ಮುಂಬೈ ಮಾಜಿ ಪೊಲೀಸ್ ಸಚಿನ್ ವಾಜೆ ಅವರಿಗೆ ಹತ್ತಿರವಾಗಿದ್ದಾರೆ ಎಂದು ತಿಳಿದುಬಂದಿದೆ. ಎರಡು ಪ್ರಕರಣಗಳ ಮುಖ್ಯ ರೂವಾರಿ ಎನ್ನಲಾದ ಸಚಿನ್ ವಾಜೆ ಅವರನ್ನು ಎನ್ಐಎ ಬಂಧಿಸಿತ್ತು.

ಫೆ. 25ರಂದು ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ಕುರಿತು ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ಸ್ಫೋಟಕ ತುಂಬಿದ್ದ ವಾಹನದಲ್ಲಿ ಬೆದರಿಕೆಯ ಪತ್ರವೂ ಇತ್ತು. ಮುಕೇಶ್ ಅವರ ನಿವಾಸದ ಬಳಿ ಪತ್ತೆಯಾಗಿದ್ದ ವಾಹನವು ಮನ್‌ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು. ಈ ವಾಹನ ಕಳವಾಗಿದ್ದ ಕುರಿತು ವಾರದ ಹಿಂದೆಯಷ್ಟೇ ಹಿರೇನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾರ್ಚ್ 5ರಂದು ಹಿರೇನ್ ಅವರ ಶವವು ಠಾಣೆ ಸಮೀಪ ಪತ್ತೆಯಾಗಿತ್ತು.

ಪ್ರದೀಪ್ ಶರ್ಮಾ 1983 ರಲ್ಲಿ ಮುಂಬೈ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇರಿಕೊಂಡರು ಮತ್ತು ಮುಂಬೈ ಭೂಗತ ಜಗತ್ತಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಎನ್ ಕೌಂಟರ್ ಗಳಲ್ಲಿ ಭಾಗಿಯಾಗಿದ್ದಾರೆ, ಅವುಗಳಲ್ಲಿ 113 ಶೂಟೌಟ್ ಗಳು ಅವರ ಹೆಸರಿನಲ್ಲಿವೆ.

2019ರಲ್ಲಿ ಸ್ವಯಂ ನಿವೃತ್ತಿ ಪಡೆದು ಶಿವಸೇನೆ ಸೇರಿದ್ದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರು ನಾಲಾ ಸೋಪಾರಾ ಸ್ಥಾನದಿಂದ ಶಿವಸೇನೆ ಟಿಕೆಟ್ ನಲ್ಲಿ ಸ್ಪರ್ಧಿಸಿ ಸೋತರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: