Uncategorized

ದರ್ಶನ್ ಮನವಿಗೆ ಕೈ ಜೋಡಿಸಿ ಪ್ರಾಣಿಗಳ ದತ್ತು ಪಡೆದ ಸ್ಯಾಂಡಲ್‌ವುಡ್ ತಾರೆಯರು

ಬೆಂಗಳೂರು,ಜೂ.17-ಕೋವಿಡ್ ಕಾರಣದಿಂದ ಕರ್ನಾಟಕ ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಹಿನ್ನೆಲೆ ಮೃಗಾಲಯದಲ್ಲಿರುವ ಪ್ರಾಣಿಗಳು, ಪಕ್ಷಿಗಳನ್ನು ದತ್ತು ಪಡೆಯುವ ಮೂಲಕ ನೆರವು ನೀಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿನಂತಿಸಿದ್ದರು.

ದರ್ಶನ್ ಮನವಿ ಬಳಿಕ ಅವರ ಅಭಿಮಾನಿಗಳು, ಸಾರ್ವಜನಿಕರು, ರಾಜಕಾರಣಿಗಳು, ಸ್ಯಾಂಡಲ್ ವುಡ್ ನ ಯುವತಾರೆಯರು ಈ ಮಹತ್ವದ ಕೆಲಸಕ್ಕೆ ಕೈ ಜೋಡಿಸಿದ್ದಾರೆ.

ದರ್ಶನ್ ಅವರ ಮನವಿ ನಂತರ ಹದಿನೈದು ದಿನದಲ್ಲಿ 1.5 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯಗಳ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ನಟ ಉಪೇಂದ್ರ ಅವರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದುಕೊಂಡಿದ್ದಾರೆ. ನಟಿ ಅಮೂಲ್ಯ ದಂಪತಿ ಮೈಸೂರಿನ ಮೃಗಾಲಯದಲ್ಲಿ ಚಿರತೆ ದತ್ತು ಪಡೆದಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ನಟಿ ‘ನಾವು ಮೈಸೂರಿನ ಮೃಗಾಲಯದಲ್ಲಿ ಒಂದು ‘ಜಾಗ್ವಾರ್’ ಅನ್ನು ದತ್ತು ಪಡೆಯುವ ಮೂಲಕ, ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ನೀಡಿದೆ. ಇಂತಹ ಒಂದು ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿ, ಪ್ರೋತ್ಸಾಹ ನೀಡುತ್ತಿರುವ ದರ್ಶನ್ ಸರ್‌ಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದರು. ಇದಕ್ಕೆ ದರ್ಶನ್ ಪ್ರತಿಕ್ರಿಯಿಸಿ ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಇನ್ನು ಮೈಸೂರಿನ ಮೃಗಾಲಯದಲ್ಲಿ ನಟಿ ಕಾರುಣ್ಯ ರಾಮ್ ಚಿರತೆ, ಡೆಡ್ಲಿ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ ಅವರು ಜೋಡಿಹಕ್ಕಿಯನ್ನು, ಯುವ ನಟಿ ಅನುಷಾ ರೈ ಬಿಳಿ ನವಿಲು, ನಟಿ ಪ್ರಿಯಾಂಕಾ ತಿಮ್ಮೇಶ್ ಕೃಷ್ಣಮೃಗ, ನಿರ್ಮಾಪಕ ಸೌಂದರ್ಯ ಜಗದೀಶ್ ಬೆಂಗಾಲ್ ಟೈಗರ್ ದತ್ತು ಪಡೆದುಕೊಂಡಿದ್ದಾರೆ.

ಕನ್ನಡದ ಯುವ ನಟ (ಬ್ರಹ್ಮಪುತ್ರ ಸಿನಿಮಾ) ಅಭಯ್ ವೀರ್ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಚಿರತೆ ದತ್ತು ಪಡೆದಿದ್ದಾರೆ.

ನಟಿಯರಾದ ಅಶ್ವಿತಿ ಶೆಟ್ಟಿ ಮತ್ತು ಸಹೋದರಿ ಅದ್ವಿತಿ ಶೆಟ್ಟಿ ಇಬ್ಬರು ಪ್ರತ್ಯೇಕವಾಗಿ ಬನ್ನೇರುಘಟ್ಟ ಮೃಗಾಲಯದಲ್ಲಿ ಜೋಡಿ ಆಮೆಗಳನ್ನು ದತ್ತು ಪಡೆದಿದ್ದಾರೆ. ದರ್ಶನ್ ಅವರಿಂದ ಸ್ಫೂರ್ತಿಯಾಗಿ ಈ ಅಳಿಲು ಸೇವೆ ಮಾಡುತ್ತಿರುವುದಾಗಿ ಇಬ್ಬರು ಟ್ವೀಟ್ ಮಾಡಿದ್ದಾರೆ.

ಪಂಚತಂತ್ರ ಹಾಗೂ ರಾಬರ್ಟ್ ಚಿತ್ರಗಳಲ್ಲಿ ಗಮನ ಸೆಳೆದಿದ್ದ ನಟಿ ಸೋನಾಲೆ ಬನ್ನೇರುಘಟ್ಟ ಮೃಗಾಲಯದಲ್ಲಿ ಬಿಳಿ ನವಿಲು ದತ್ತು ಪಡೆದುಕೊಂಡಿದ್ದಾರೆ. ಮತ್ತೊಬ್ಬ ಯುವ ನಟಿ ಕಾವ್ಯ ವೆಂಕಟೇಶ್ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ಬಿಳಿ ನವಿಲು ದತ್ತು ಪಡೆದುಕೊಂಡಿದ್ದರು. ಇವರೆಲ್ಲರಿಗೂ ದರ್ಶನ್ ಧನ್ಯವಾದ ತಿಳಿಸಿದ್ದಾರೆ.

ಇನ್ನು ಪತ್ರಕರ್ತ-ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ಇತ್ತೀಚೆಗಷ್ಟೆ ಮೃತಪಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ದಾವಣಗೆರೆಯ ಇಂದಿರಾ ಪ್ರಿಯದರ್ಶನಿ ಪ್ರಾಣಿಸಂಗ್ರಹಾಲಯದಲ್ಲಿ ಗಿಣಿಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.

ಈ ವಿಷಯವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಂದ್ರಚೂಡ್ ಅವರು, `ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ. ಅದಕೇ ನಿನ್ ಹೆಸರಲ್ಲೊಂದು ತಗೊಂಡಿದೀನಿ ನೋಡಿ ಸ್ವಾಮಿ…’ ಎಂದು ಬರೆದುಕೊಂಡಿದ್ದಾರೆ.  (ಎಂ.ಎನ್)

Leave a Reply

comments

Related Articles

error: