ದೇಶಪ್ರಮುಖ ಸುದ್ದಿ

ಜುಲೈ 31 ರೊಳಗೆ ಸಿಬಿಎಸ್ ಇ 12ನೇ ತರಗತಿಯ ಫಲಿತಾಂಶ ಪ್ರಕಟ

ನವದೆಹಲಿ,ಜೂ.17- ಸಿಬಿಎಸ್ ಇಯ 12ನೇ ತರಗತಿಯ ಫಲಿತಾಂಶವನ್ನು ಜುಲೈ 31ರೊಳಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಇಂದು ಸುಪ್ರೀಂಕೋರ್ಟ್ ಗೆ ತಿಳಿಸಿದೆ.

10 ಮತ್ತು 11ನೇ ತರಗತಿಯ ಅಂತಿಮ ಪರೀಕ್ಷೆಯ ಅಂಕಗಳನ್ನು ಆಧರಿಸಿ ಹಾಗೂ ದ್ವಿತೀಯ ಪಿಯುಸಿ ಪೂರ್ವ ತಯಾರಿ ಪರೀಕ್ಷೆಯ ಫಲಿತಾಂಶದ ಅಂಕಗಳನ್ನು ಪರಿಗಣಿಸಿ 30:30:40 ಸೂತ್ರವನ್ನು ಅಳವಡಿಸಿಕೊಂಡು ‌‌12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ.

10 ಮತ್ತು 11ನೇ ತರಗತಿಯಲ್ಲಿ ಗಳಿಸಿರುವ ಅಂಕಗಳಿಂದ ತಲಾ ಶೇ.30 ಹಾಗೂ 12ನೇ ತರಗತಿಯ ಆಂತರಿಕ ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳಿಂದ ಶೇ.40ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು, 12ನೇ ತರಗತಿಯ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

ಈ ಸೂತ್ರದ ಮೌಲ್ಯಮಾಪನದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಈ ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆಯಾದ ನಂತರ 12ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಮತ್ತು ದಿನೇಶ್‌ ಮಹೇಶ್ವರಿ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ಸಿಬಿಎಸ್‌ಇ ಶಿಕ್ಷಣ ಪದ್ಧತಿಯಲ್ಲಿರುವ ವಿವಾದ ಬಗೆಹರಿಸುವ ಕಾರ್ಯವಿಧಾನಕ್ಕೆ ಬರುವಂತೆ ಉನ್ನತ ನ್ಯಾಯಾಲಯವು ವೇಣುಗೋಪಾಲ್‌ಗೆ ತಿಳಿಸಿತು. ಇದರಿಂದ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನೋಡಿಕೊಳ್ಳಬಹುದು ಎಂದು ಅದು ಅಭಿಪ್ರಾಯಪಟ್ಟಿತು.

‘ವಿದ್ಯಾರ್ಥಿಗಳ ಕಾಳಜಿಗೆ ಸಂಬಂಧಿಸಿದಂತೆ, ಅವರಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಲು ಸಮಿತಿ ರಚಿಸಲಾಗುವುದು’ ಎಂದು ವೇಣುಗೋಪಾಲ್ ನ್ಯಾಯಪೀಠಕ್ಕೆ ಭರವಸೆ ನೀಡಿದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: