ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ಪಾಲಿಕೆಯ ಎಲ್ಲಾ 198 ವಾರ್ಡ್‍ಗಳಲ್ಲಿ ಏಕಕಾಲಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ : ಸಿದ್ದರಾಮಯ್ಯ

ಬೆಂಗಳೂರು:ಬೆಂಗಳೂರು ಮಹಾನಗರಕ್ಕೆ ಉದ್ಯೋಗ ಅರಸಿ ಆಗಮಿಸುವ ಉದ್ಯೋಗಾಕಾಂಕ್ಷಿಗಳೂ ಹಾಗೂ ನಗರದ ವಿವಿಧೆಡೆ ದುಡಿಯುತ್ತಿರುವ ಶ್ರಮಿಕ ವರ್ಗಕ್ಕೆ ಅನುಕೂಲವಾಗಲಿ ಎಂದು  ಪ್ರಸಕ್ತ 2017-18 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಿಯಾಯಿತಿ ದರದಲ್ಲಿ  ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವ ರಾಜ್ಯ ಸರ್ಕಾರದ  ಮಹತ್ವಾಕಾಂಕ್ಷೀ ಯೋಜನೆ ಇಂದಿರಾ ಕ್ಯಾಂಟೀನ್ ಭಾರತದ 71 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಆಗಸ್ಟ್ 15 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ 198 ವಾರ್ಡ್‍ಗಳಲ್ಲಿ  ಏಕಕಾಲಕ್ಕೆ ಉದ್ಘಾಟನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸಂಬಂಧಿಸಿದಂತೆ ನಡೆದ ಸಭೆಯ ನಂತರ ಮಾಧ್ಯಮದವರ  ಜೊತೆ ಮಾತನಾಡುತ್ತಾ, ಸಿದ್ದರಾಮಯ್ಯ  ಈ ವಿಷಯವನ್ನು ಪ್ರಕಟಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ನಿರ್ವಹಿಸಲಿರುವ ಈ ಕ್ಯಾಂಟೀನ್‍ನ ಸ್ಥಾಪನೆಗಾಗಿ ನಗರದಲ್ಲಿ ಈಗಾಗಲೇ 240 ಸ್ಥಳಗಳನ್ನು ಗುರುತಿಸಲಾಗಿದೆ. ಎಲ್ಲೆಡೆ ಸುಮಾರು 500 ಚದುರ ಅಡಿ ಸ್ಥಳದಲ್ಲಿ ಒಂದೇ ವಿನ್ಯಾಸದಲ್ಲಿ ಮೈದೇಳಲಿರುವ ಈ ಕ್ಯಾಂಟೀನ್‍ನ ಪ್ರತಿ ಕಟ್ಟಡಕ್ಕೆ 7.5 ಲಕ್ಷ ರೂ ತಗುಲಲಿದೆ.  ಕ್ಯಾಂಟೀನ್‍ನ ಕಟ್ಟಡ ಕಾಮಗಾರಿಗಳಿಗಾಗಿ ಒಟ್ಟಾರೆ 15 ಕೋಟಿ ರೂ ಮೀಸಲಿರಿಸಲಾಗಿದೆ.  ಭೂ ಸೇನಾ ನಿಗಮ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿದೆ ಎಂದು  ವಿವರಿಸಿದರು.
ಲಾಂಛನ ಹಾಗೂ ವಿನ್ಯಾಸಕ್ಕೆ ಸಾರ್ವಜನಿಕರ ಸ್ಪಂದನೆ : ಇಂದಿರಾ ಕ್ಯಾಂಟೀನ್‍ನ ಲಾಂಛನವನ್ನು ರೂಪಿಸಿ 671 ಪರಿಕಲ್ಪನೆಗಳು ಸಾರ್ವಜನಿಕರಿಂದ ಸ್ವೀಕೃತವಾಗಿವೆ. ಅಂತೆಯೇ, ಕ್ಯಾಂಟೀನ್‍ನ ಕಟ್ಟಡ ಒಂದೇ ವಿನ್ಯಾಸ ಹೊಂದಿರಬೇಕು ಎಂಬ ಸದುದ್ದೇಶದಿಂದ ಮಾಡಿದ ಮನವಿಗೆ ಸ್ಪಂದಿಸಿ 177 ಸಾರ್ವಜನಿಕರು ಹಾಗೂ ವಾಸ್ತುಶಿಲ್ಪಿಗಳು ವಿನ್ಯಾಸವನ್ನು ಕಳುಹಿಸಿಕೊಟ್ಟಿದ್ದಾರೆ. ಇವೆಲ್ಲವನ್ನೂ ಬೆಂಗಳೂರು ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಹಾಗೂ  ನಗರ ಯೋಜನಾ ಸಚಿವ ಕೆ ಜೆ ಜಾರ್ಜ್ ಅವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ಪರಿಶೀಲಿಸಿ ಸಾರ್ವಜನಿಕರ ಹಿತ ದೃಷ್ಠಿಯಿಂದ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು ಟಿ ಖಾದರ್,    ಬೆಂಗಳೂರು ಮಹಾಪೌರರಾದ ಪದ್ಮಾವತಿ, ಉಪಮಹಾಪೌರರಾದ ಆನಂದ್,  ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್,  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈ ಸಮಿತಿಯ ಇತರೆ ಸದಸ್ಯರಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಈರುಳ್ಳಿ-ಬೆಳ್ಳುಳ್ಳಿ ಇಲ್ಲ ! ಕೇವಲ ಐದು ರೂಪಾಯಿಗೆ ಬೆಳಗಿನ ಉಪಾಹಾರ, ಹತ್ತು ರೂಪಾಯಿಗಳಿಗೆ   ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವ ಇಂದಿರಾ ಕ್ಯಾಂಟೀನ್‍ನಲ್ಲಿ ಗುಣಮಟ್ಟ ಆಹಾರ ಕಾಯ್ದುಕೊಳ್ಳಲು ಇಸ್ಕಾನ್‍ಗೆ ವಹಿಸಬಾರದೇಕೆ ? ಎಂಬ ಪತ್ರಕರ್ತರ ಪ್ರಶ್ನೆಗೆ  ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಇಸ್ಕಾನ್‍ನವರು ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ ಎಂದು ಹೇಳಲಾಗುತ್ತದೆ. ಗುಣಮಟ್ಟದ ಜೊತೆಗೆ ಎಲ್ಲರು ಬಯಸುವ ರುಚಿಯನ್ನೂ ಕಾಯ್ದುಕೊಳ್ಳಬೇಕು.   ಆದಕಾರಣ, ಸ್ಪರ್ಧಾತ್ಮಕವಾಗಿ ಏಜೆನ್ಸಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಕೊಳಗೇರಿ ನಿವಾಸಿಗಳಿಗೆ ಉಚಿತ ನೀರು ! ಕೊಳಗೇರಿ ಜನರ ನೀರಿನ ಶುಲ್ಕದ ಬಾಕಿನ್ನು ಮನ್ನಾ ಮಾಡಲು ಹಾಗೂ ಕೊಳಗೇರಿ ನಿವಾಸಿಗಳಿಗೆ ಪ್ರತಿ ತಿಂಗಳಿಗೆ ಹತ್ತು ಸಾವಿರ ಲೀಟರ್ ಉಚಿತ ನೀರು ಒದಗಿಸಲು ಯೋಜಿಸಲಾಗಿದೆ.   ಈ ಬಗ್ಗೆ ಶೀಘ್ರದಲ್ಲೇ ಸಂಪುಟವು ನಿರ್ಧಾರ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

Leave a Reply

comments

Related Articles

error: