ದೇಶಪ್ರಮುಖ ಸುದ್ದಿ

ಘಾಜಿಯಾಬಾದ್‌ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಟ್ವಿಟರ್‌ ಇಂಡಿಯಾ ಎಂಡಿಗೆ ನೋಟಿಸ್‌

ಘಾಜಿಯಾಬಾದ್‌,ಜೂ.18- ಮುಸ್ಲಿಂ ವೃದ್ಧರೊಬ್ಬರಿಗೆ ಹಲ್ಲೆ ಮಾಡಿ, ಜೈ ಶ್ರೀರಾಮ್‌ ಹೇಳುವಂತೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಟ್ವಿಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಘಾಜಿಯಾಬಾಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಟ್ವಿಟರ್‌ ಇಂಡಿಯಾ ಎಂಡಿ ಮನೀಶ್‌ ಮಹೇಶ್ವರಿ ಅವರಿಗೆ ಏಳು ದಿನದಲ್ಲಿ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಘಾಜಿಯಾಬಾದ್‌ ಪೊಲೀಸರು ನೋಟಿಸ್ ನೀಡಿದ್ದಾರೆ. ಲೋನಿ ಬಾರ್ಡರ್‌ನಲ್ಲಿರುವ ಪೊಲೀಸ್‌ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ನೋಟಿಸ್‌ನಲ್ಲಿ ಹೇಳಲಾಗಿದೆ.

ಟ್ವಿಟರ್‌ನಲ್ಲಿ ವೈರಲ್‌ ಆಗಿದ್ದ ವಿಡಿಯೋದಲ್ಲಿ ನಾಲ್ವರು ಯುವಕರು ವೃದ್ಧನ ಗಡ್ಡವನ್ನು ಕತ್ತರಿಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ಪಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಕೋಮುಸಂಘರ್ಷಕ್ಕೆ ದಾರಿ ಮಾಡಿಕೊಡುವ ಪೋಸ್ಟ್‌ ಎಂದು ಪೊಲೀಸರು ಟ್ವಿಟರ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವೈರಲ್‌ ವಿಡಿಯೋದಲ್ಲಿ ಹಲ್ಲೆಗೆ ಒಳಗಾದ ವೃದ್ಧ ಸೈಫಿ ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದರು ಎಂದಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಅಂತಹ ಯಾವುದೇ ಆರೋಪಗಳನ್ನು ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿಗಳು ಸೈಫಿ ಮಾರಾಟ ಮಾಡಿದ ತಾಯತದ ಬಗ್ಗೆ ಅಸಮಾಧಾನಗೊಂಡಿದ್ದರು’ ಎಂದಿರುವ ಪೊಲೀಸರು, ಹಲ್ಲೆಯ ಹಿಂದೆ ಕೋಮುದ್ವೇಷದ ಬಗ್ಗೆ ಅಲ್ಲಗಳೆದಿದ್ದಾರೆ.

ಮುಸ್ಲಿಂ ವ್ಯಕ್ತಿಯೊಬ್ಬರ ವಿಡಿಯೋ ಹಂಚಿಕೊಂಡ ಕಾರಣಕ್ಕೆ ಉತ್ತರ ಪ್ರದೇಶದ ಸುದ್ದಿಸಂಸ್ಥೆ ಮತ್ತು ಕೆಲವು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಸಂಪಾದಕರ ಕೂಟ (ಇಜಿಐ) ಖಂಡಿಸಿದ್ದು, ದೂರು ಹಿಂಪಡೆಯುವಂತೆ ಒತ್ತಾಯಿಸಿದೆ. ವಯಸ್ಸಾದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಕ್ಕಾಗಿ ‘ದಿ ವೈರ್’ ಮತ್ತು ಹಲವಾರು ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಎಫ್‌ಐಆರ್ ಹಾಕಿದೆ.

ಟ್ವಿಟರ್ ಐಎನ್‌ಸಿ, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ, ದಿ ವೈರ್‌ ನ್ಯೂಸ್ ಪೋರ್ಟಲ್, ಪತ್ರಕರ್ತರಾದ ಮೊಹಮ್ಮದ್ ಜುಬೈರ್, ರಾಣಾ ಅಯೂಬ್, ಸಬಾ ನಖ್ವಿ ಮತ್ತು ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಾಮ ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: