
ಮೈಸೂರು
ಚಾಲಕರುಗಳ ಹಾಗೂ ಮೆಕ್ಯಾನಿಕ್ ಗಳಿಗೆ ಆಹಾರ ಕಿಟ್ ವಿತರಣೆ
ಮೈಸೂರು,ಜೂ.18:- ಮೈಸೂರು ದೊಡ್ಡಕೆರೆ ಮೈದಾನ ವಸ್ತುಪ್ರದರ್ಶನದ ಮುಂಭಾಗ ಚಾಲಕರುಗಳ ಹಾಗೂ ಮೆಕ್ಯಾನಿಕ್ ಗಳಿಗೆ ಮೈಸೂರು ಜಿಲ್ಲಾ ಪ್ರವಾಸಿ ಬಸ್ ಮಾಲೀಕರ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಜಿಲ್ಲಾಧ್ಯಕ್ಷ ಎ.ವಿ ಪೃಥ್ವಿರಾಜ್ ಮಾತನಾಡಿ ಶಾಸಕ ಜಿ.ಟಿ.ದೇವೇಗೌಡ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರ ಆಶಯದಂತೆ ಕಿಟ್ ವಿತರಿಸಲಾಗುತ್ತಿದೆ. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಚಾಲಕರುಗಳು ಮತ್ತು ಮೆಕ್ಯಾನಿಕ್ ಗಳು ತೊಂದರೆಗೆ ಸಿಲುಕಿದ್ದರು. ಇದರಿಂದ ನಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತ ನೀಡಿದ್ದೇವೆ ಎಂದು ತಿಳಿಸಿದರು. ಸರ್ಕಾರ ಬಸ್ ಮಾಲೀಕರಿಗೆ, ನಿರ್ವಾಹಕರಿಗಾಗಲಿ ಯಾರಿಗೂ ಪ್ಯಾಕೇಜ್ ಘೋಷಣೆ ಮಾಡಿಲ್ಲ. 10ಲಕ್ಷದ ಮೇಲೆ ಕುಟುಂಬಗಳಿವೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡದಿರುವುದು ನೋವಿನ ಸಂಗತಿ. ಚಾಲಕರು, ನಿರ್ವಾಹಕರು, ಮಾಲೀಕರುಗಳಿಗೆ ಸಹಾಯ ಮಾಡಬೇಕು. ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದೇವೆ. ತೆರಿಗೆ ಕಟ್ಟುವಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ನಮ್ಮಂತಹವರಿಗೆ ಪ್ಯಾಕೇಜ್ ಘೋಷಣೆ ಮಾಡಿಲ್ಲದಿರುವುದು ದುರಂತ. ಬೇಕಾದಾಗ ಉಪಯೋಗಿಸಿಕೊಂಡು ಬಿಸಾಕಿದ್ದೀರಿ ನಮ್ಮ ಮನವಿಯನ್ನು ಸರ್ಕಾರ ಸ್ವೀಕರಿಸಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಹೆಚ್.ಎನ್.ರಾಜಶೇಖರ್, ಪ್ರಧಾನಕಾರ್ಯದರ್ಶಿ ಎಸ್.ದಯಾನಂದಸ್ವಾಮಿ, ಜಂಟಿ ಕಾರ್ಯದರ್ಶಿ ಎಸ್.ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)