ಸುದ್ದಿ ಸಂಕ್ಷಿಪ್ತ

ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ರಾಜ್ಯ(ಮಡಿಕೇರಿ) ಜೂ.19:- ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ ಪಾವತಿಸುವ ಸಲುವಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಜುಲೈ, 01 ರಿಂದ ಆಗಸ್ಟ್, 14 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕೊಡಗು ಜಿಲ್ಲೆಯವರಾಗಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು 03 ಅಥವಾ 05 ವರ್ಷಗಳ ಒಳಗಡೆ ಕಾನೂನು ಪದವಿ ಪಡೆದಿರಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪ್ರಾಸಿಕ್ಯೂಟ್ ಬಳಿ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದಲ್ಲಿ ಮಾತ್ರ ನಿಯಮಾನುಸಾರ ಸಡಿಲಗೊಳಿಸಲಾಗುವುದು. ಒಂದು ವೇಳೆ ತರಬೇತಿ ಬಿಟ್ಟು ಹೋದಲ್ಲಿ ಅಂತವರ ಶಿಷ್ಯ ವೇತನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು.

ತರಬೇತಿ ಅವಧಿಯು 02 ವರ್ಷಗಳಾಗಿದ್ದು, ಮಾಸಿಕ ರೂ.10,000 ಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. 2,50,000 ಮೀರತಕ್ಕದ್ದಲ್ಲ. ಸುಳ್ಳು ಮಾಹಿತಿ ದಾಖಲಾತಿಗಳನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿ ಪಡಿಸಲಾಗುವುದು. ಅಂತಹ ಅಭ್ಯರ್ಥಿಗಳಿಂದ ತರಬೇತಿ ಅವಧಿಯಲ್ಲಿ ನೀಡಿದ ಶಿಷ್ಯವೇತನವನ್ನು ಶೇ.10ರ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು. ಅರ್ಜಿಯಲ್ಲಿ ಪೂರ್ಣ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಅರ್ಜಿ ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯು ಕಾನೂನು ಪದವಿಯಲ್ಲಿ ತೇರ್ಗಡೆ ಹೊಂದಿದ 03 ವರ್ಷದೊಳಗೆ ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೊಂದಾಯಿಸಿದ ನಂತರ ಶಿಷ್ಯವೇತನ ಮತ್ತು ಎನ್‍ರೋಲ್‍ಮೆಂಟ್ ಫೀಯನ್ನು ನೀಡಬೇಕು.

ಸದಸ್ಯ ಕಾರ್ಯದರ್ಶಿಯು ಅಧ್ಯಕ್ಷರ ಪೂರ್ವಾನುಮತಿ ಪಡೆದು ಅಭ್ಯರ್ಥಿಯ ಶಿಷ್ಯ ವೇತನವನ್ನು ದೂರು ಬಂದಲ್ಲಿ ಅಥವಾ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ್ದಲ್ಲಿ ಮತ್ತು ತರಬೇತಿಗೆ ಮಾಹಿತಿ ನೀಡದೆ ಗೈರು ಹಾಜರಾಗಿದ್ದಲ್ಲಿ ತಡೆಯಬಹುದು. ಅಧ್ಯಕ್ಷರು ಈ ಬಗ್ಗೆ ಪರಿಶೀಲಿಸಿ ಅಭ್ಯರ್ಥಿಯ ಕಡೆಯಿಂದ ಯಾವುದೇ ಲೋಪವಿಲ್ಲವೆಂದು ಕಂಡು ಬಂದಲ್ಲಿ ತಡೆ ಹಿಡಿದಿರುವ ಶಿಷ್ಯ ವೇತನವನ್ನು ಮರು ಪಾವತಿಸಲು ಆದೇಶಿಸಬಹುದು.

ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕಾನೂನು ಪದವೀಧರ ತರಬೇತಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಗರ್ಭಿಣಿ ಸ್ಥಿತಿಯಲ್ಲಿರುವ ವೇಳೆ ಮಹಿಳಾ ಅಭ್ಯಥಿಗಳಿಗೆ 135 ದಿನಗಳ ತರಬೇತಿ ಭತ್ಯೆ ರಹಿತ ರಜೆಯನ್ನು (2 ವರ್ಷಗಳ ತರಬೇತಿಗೆ 1 ಬಾರಿ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಪಡೆದು ರಜೆ ಮಂಜೂರುಗೊಳಿಸಿ ತರಬೇತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಇಲಾಖಾ ವೆಬ್‍ಸೈಟ್ www.sw.kar.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಧೃಡೀಕೃತ ಹಾರ್ಡ್ ಕಾಪಿಯ ದಾಖಲಾತಿಗಳನ್ನು ಆಗಸ್ಟ್, 14 ರೊಳಗೆ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ- 08272-225531. ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ-08272-223552. ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115. ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ-08274-249476 ಕಚೇರಿಗಳಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: