
ದೇಶಪ್ರಮುಖ ಸುದ್ದಿ
ಅಸ್ಸಾಂ: ಈಶಾನ್ಯ ಭಾಗದಲ್ಲಿ 24 ಗಂಟೆಗಳಲ್ಲಿ 5 ಬಾರಿ ಭೂಕಂಪ
ಗುವಾಹಟಿ,ಜೂ.19-ಅಸ್ಸಾಂನಲ್ಲಿ ಶನಿವಾರ ಮುಂಜಾನೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಕಳೆದ 24 ಗಂಟೆಗಳಲ್ಲಿ ಈಶಾನ್ಯ ಭಾಗದಲ್ಲಿ ಸಂಭವಿಸಿದ ಐದನೇ ಭೂಕಂಪವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಭೂಕಂಪ ಸಂಭವಿಸಿದ್ದು, ಸೋನಿತ್ಪುರ ಜಿಲ್ಲೆಯ ತೇಜಾಪುರದಲ್ಲಿ 30 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಈ ವೇಳೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು ಹೇಳಿದೆ.
ಶುಕ್ರವಾರವೂ ಎರಡು ಬಾರಿ ಭೂಮಿ ಕಂಪಿಸಿದೆ. ಇದರಲ್ಲಿ ಒಂದು ಭೂಕಂಪನದ ತೀವ್ರತೆಯು 4.1ರಷ್ಟಿತ್ತು. ಈ ಎರಡೂ ಭೂಕಂಪನದ ಕೇಂದ್ರ ಬಿಂದು ಸೋನಿತ್ಪುರ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಇದನ್ನು ಹೊರತುಪಡಿಸಿ ಮಣಿಪುರದ ಚಂದೇಲಾ ಜಿಲ್ಲೆಯಲ್ಲೂ ನಿನ್ನೆ ಭೂಮಿ ನಲುಗಿದೆ. ಮೇಘಾಲಯದ ಪಶ್ಚಿಮ ಖಾಸಿ ಹಿಲ್ ಜಿಲ್ಲೆಯಲ್ಲಿ 2.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ಹೇಳಿದರು. (ಏಜೆನ್ಸೀಸ್, ಎಂ.ಎನ್)