ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊವೀಡ್-19 ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ ಕುರಿತಂತೆ ಸಚಿವೆ ಶಶಿಕಲಾ ಜೊಲ್ಲೆ ಸಭೆ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತಿ

ಮೈಸೂರು, ಜೂ.19:- ಜಿಲ್ಲೆಯಲ್ಲಿ ಕೊವೀಡ್-19 ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ ಕುರಿತಂತೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಶನಿವಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸಭೆ ನಡೆಸಿದರು.

ಕೋವಿಡ್-19 ಸೋಂಕಿನಿಂದಾಗಿ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉನ್ನತ ಶಿಕ್ಷಣ ಮಾಡುವವರಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ಕೋವಿಡ್-19 ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ರಾಜ್ಯ ಸರ್ಕಾರವು ‘ಬಾಲಸೇವಾ ಯೋಜನೆಯನ್ನು’ ಜಾರಿಗೆ ತಂದಿದೆ. ಅಲ್ಲದೆ ಅಂತಹ ಮಕ್ಕಳ ಖಾತೆಗೆ ಪ್ರತಿ ತಿಂಗಳು 3,500 ರೂ. ಹಣವನ್ನು ಜಮೆ ಮಾಡಲಾಗುತ್ತದೆ. 21ವರ್ಷ ತುಂಬಿದ ಹೆಣ್ಣು ಮಕ್ಕಳ ಖಾತೆಗೆ 1 ಲಕ್ಷ ರೂ. ಹಣವನ್ನು ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಕೋವಿಡ್-19 ಸಂಭಾವ್ಯ 3ನೇ ಅಲೆಯು ಮಕ್ಕಳ ಮೇಲೆ ಬಂದರೆ ಹೆಚ್ಚು ಹಾನಿಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ‌. ಆದ್ದರಿಂದ 3ನೇ ಅಲೆಯು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುವುದು. ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಮಕ್ಕಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ 10 ವರ್ಷದ ಮಕ್ಕಳ ಮೇಲೆ ಹೆಚ್ಚು ನಿಗಾವಹಿಸಲು ಮಕ್ಕಳ ಪೋಷಕರನ್ನೇ ಇರಿಸಲಾಗುವುದು. ಇದಕ್ಕಾಗಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ 5 ಇಲಾಖೆಗಳ ಸಹಕಾರ ಮುಖ್ಯವಾಗಿದೆ ಎಂದರು.

ಕೋವಿಡ್-19 ಮಕ್ಕಳಿಗೆ ಹರಡದಂತೆ ಮುಂಜಾಗ್ರತವಾಗಿ ಪರೀಕ್ಷೆ ಮಾಡಿಸುವ ಸಲುವಾಗಿ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಕ್ಕಳಿಗೆ ಪರೀಕ್ಷೆಯನ್ನು ಆಯಾ ತಾಲ್ಲೂಕಿನ ವಿಶಾಲವಾದ ಸ್ಥಳಗಳಲ್ಲಿ, ಶಿಶುವಿವಾಹರಗಳಲ್ಲಿ ನಡೆಸಲು ಚಿಂತಿಸಲಾಗಿದೆ. ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುತ್ತದೆ ಎಂದು ಹೇಳಿದರು.

ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಇದನ್ನು ಗಂಭೀರವಾಗಿ ತೆಗೆದುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ ವಿಶೇಷ ಚೇತನ ಮಕ್ಕಳಾದ ಪ್ರಶಾಂತ್ ಕುಮಾರ್, ರಕ್ಷಿತಾ, ವರ್ಷಿಣಿ, ಪ್ರೀತಂ, ಮಹದೇವಮ್ಮ ಸೇರಿದಂತೆ 7 ಮಕ್ಕಳಿಗೆ ವ್ಹೀಲ್ ಚೇರ್, ಮೆಡಿಷನ್ ಕಿಟ್ ಸೇರಿದಂತೆ ಇತರ ಸಾಧನಗಳನ್ನು ವಿತರಿಸಿದರು.

ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್‌.ನಾಗೇಂದ್ರ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಹೆಚ್.ಪಿ.ಮಂಜುನಾಥ್, ಬಿ.ಹರ್ಷವರ್ದನ್, ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್.ವಿಶ್ವನಾಥ್, ಆರ್.ಧರ್ಮಸೇನ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಸಿಇಒ, ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: