ಕರ್ನಾಟಕಪ್ರಮುಖ ಸುದ್ದಿಮೈಸೂರು

ಅಭಿವೃದ್ಧಿಯ ದೃಷ್ಟಿಯಿಂದ ಮುಡಾ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಿದ  ಸಿಎಂ ಬಿಎಸ್ ವೈ : ಅಭಿನಂದಿಸಿದ ಸಚಿವ ಎಸ್.ಟಿ.ಎಸ್

ಮೈಸೂರು,ಜೂ.21:-  ಸಾಂಸ್ಕೃತಿಕ ಸುಂದರ ನಗರಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿದ್ದು, ಮೈಸೂರು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲೆಯ ಜನತೆಯ ಒಟ್ಟಾರೆ ಯೋಗಕ್ಷೇಮಕ್ಕೆ ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರಿನ ಅಭಿವೃದ್ಧಿಯ ದೃಷ್ಟಿಯಿಂದ ನಿರ್ಣಯವನ್ನು ತೆಗೆದುಕೊಂಡಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಹಣವನ್ನು ಬಳಸಲು ಒಪ್ಪಿಗೆ ನೀಡುವ ಮೂಲಕ 2 ದಶಕಗಳಿಂದ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಲಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಮುಡಾ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಿದ   ಮುಖ್ಯಮಂತ್ರಿ    ಬಿ,ಎಸ್.ಯಡಿಯೂರಪ್ಪ ಅವರನ್ನು ವೈಯುಕ್ತಿಕವಾಗಿ ಹಾಗೂ ಜಿಲ್ಲೆಯ ಜನತೆ ಪರವಾಗಿ  ಸಚಿವ ಎಸ್.ಟಿ.ಸೋಮಶೇಖರ್ ಅಭಿನಂದಿಸಿದರು.

ಮಾಧ್ಯಮ ಹೇಳಿಕೆ ನೀಡಿರುವ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಈಗಾಗಲೇ ನಿರ್ಮಾಣ ಮಾಡಲಾಗಿರುವ ಅನೇಕ ಬಡವಾಣೆಗಳಲ್ಲಿ ಬಾಕಿ ಉಳಿಸಲಾಗಿದ್ದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮುಡಾದಲ್ಲಿರುವ 422 ಕೋಟಿ ರೂಪಾಯಿಯನ್ನು ಬಳಕೆ ಮಾಡುವ ಮೂಲಕ ಕಾಮಗಾರಿಗಳನ್ನು ಕೈಗೊಳ್ಳಲು ಇಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಮೂಲಕ ಮುಡಾದಿಂದ ಅಭಿವೃದ್ಧಿಪಡಿಸಲಾದ ಬಡಾವಣೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲು ಪೂರ್ವದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಹೀಗೆ ಮಾಡುವುದರ ಜನತೆಗೆ ಅನುಕೂಲ ಕಲ್ಪಿಸಲಾಗುವುದು, ಜೊತೆಗೆ ಮೈಸೂರು ನಗರ ಪಾಲಿಕೆಗೆ ಸುಸಜ್ಜಿತ ಬಡಾವಣೆಗಳನ್ನು ನಿರ್ವಹಣೆಗಾಗಿ ಹಸ್ತಾಂತರವನ್ನು ಮಾಡಲಾಗುವುದು.

ಮುಡಾ ವತಿಯಿಂದ ಕಳೆದ 25 ವರ್ಷಗಳಿಂದ ಸುಮಾರು 15 ಬಡಾವಣೆಗಳನ್ನು ನಿರ್ಮಿಸಿ ಒಟ್ಟು 46746 ನಿವೇಶನಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಸದರಿ ಬಡಾವಣೆಗಳನ್ನು ಪ್ರಾಧಿಕಾರವು ಅಭಿವೃದ್ಧಿಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಬೇಕಿದ್ದರೂ, ಆರ್ಥಿಕ ದೃಷ್ಟಿಯಿಂದ ಸಂಪೂರ್ಣ ಕೆಲಸಗಳನ್ನು ಮಾಡಲಾಗದೆ ಕೆಲವನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ, ಇದರಿಂದ ಅಲ್ಲಿನ ನಿವಾಸಿಗಳಿಗೆ ಅನೇಕ ತೊಂದರೆಗಳು ಎದುರಾಗಿದ್ದು, ಅನೇಕ ದೂರುಗಳು ಬರತೊಡಗಿದ್ದವು. ಅಂದರೆ, ಕೆಲವು ಹಳೇ ಬಡಾವಣೆಗಳಲ್ಲಿ ಆಗಿನ ಸಂದರ್ಭಕ್ಕೆ ತಕ್ಕಂತೆ ಪ್ಲಾನಿಂಗ್ ಗಳನ್ನು ಮಾಡಿ ರಸ್ತೆಗಳ ನಿರ್ಮಾಣ, ಒಳಚರಂಡಿ, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಆದರೆ, ಇಂದು ತಂತ್ರಜ್ಞಾನಗಳು ಬೆಳೆದಿರುವುದರಿಂದ ದೊಡ್ಡ ಮಟ್ಟದ ವಾಹನಗಳ ಸಂಚಾರ, ಡ್ರೈನೇಜ್ ನಿರ್ವಹಣೆ ಸೇರಿದಂತೆ ಹಲವು ತೊಡಕುಗಳು ಕಾಣಿಸಿಕೊಂಡಿವೆ.

ಇದನ್ನು ಮನಗೊಂಡ ಮುಡಾ ಅಧ್ಯಕ್ಷರಾದ   ಹೆಚ್.ವಿ.ರಾಜೀವ್ ಅವರು ನನ್ನ ಗಮನಕ್ಕೆ ತಂದಿದ್ದರು. ಅವರು ಮತ್ತು ಅವರ ತಂಡಗಳ ಜೊತೆಗೆ ನಾನೂ ಸಹ ಅನೇಕ ಬಾರಿ ಹಲವಾರು ಬಡಾವಣೆಗಳಿಗೆ ಭೇಟಿ ನೀಡಿ ಖುದ್ದು ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ್ದೇವೆ. ಮೈಸೂರು ನಗರದ ಅಭಿವೃದ್ಧಿಯೂ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳು ಹಾಗೂ ವೆಚ್ಚದ ಬಗ್ಗೆ ರೂಪುರೇಷೆ ಸಿದ್ಧಪಡಿಸಿ, ಸಚಿವ ಸಂಪುಟದ ಮುಂದೆ ಇಡಲಾಗಿತ್ತು. ಈಗ ಮುಡಾದಲ್ಲಿರುವ ಹಣವನ್ನು ಬಡಾವಣೆಗಳ ಮೂಲ ಸೌಕರ್ಯ ಕಾಮಗಾರಿಗಳಿಗೆ ಬಳಲಸಿಕೊಳ್ಳಲು ಅನುಮೋದನೆ ನೀಡುವ ನಿರ್ಣಯವನ್ನು ತೆಗೆದುಕೊಂಡಿರುವುದರಿಂದ ಬಡಾವಣೆಗಳ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತೆ ಆಗುತ್ತದೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ ಹಾಲಿ ಇರುವ ಹೊರವರ್ತುಲ ರಸ್ತೆಗೆ ಸಂಪರ್ಕ ರಸ್ತೆಯನ್ನು ಕಲ್ಪಿಸುವುದು, ಮಹಾಯೋಜನೆಯ ರಸ್ತೆಗಳಿಗೆ ಸಂಪರ್ಕ ರಸ್ತೆಯನ್ನು ನಿರ್ಮಿಸುವುದು, ಕೆಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆಗಳಿಗೆ ಸಂಬಂಧಪಟ್ಟಂತೆ ಮ್ಯಾನ್ಹೋಲ್ ಗಳ ನಿರ್ಮಾಣ, ಯುಜಿಡಿ ಲೈನ್ ಗಳು ಮತ್ತು ಟ್ರಂಕ್ ಲೈನ್ ಗಳನ್ನು ಜೋಡಣೆ ಮಾಡಿರಬೇಕಾಗಿರುತ್ತದೆ. ಇನ್ನು ಮೈಸೂರಿಗೆ ನೀರು ಸರಬರಾಜು ವ್ಯವಸ್ಥೆಗಳ ಮೇಲೂ ಗಮನಹರಿಸಬೇಕಿದ್ದು, ಹಳೆ ಉಂಡವಾಡಿ ಯೋಜನೆ ಮತ್ತು ಕಬಿನಿ ಉನ್ನತೀಕರಣ ಯೋಜನೆ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಸದರಿ ಯೋಜನೆಯಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕಿದ್ದು, ಈ ನಿಟ್ಟಿನಲ್ಲಿ ಮೈಸೂರು ಅಭಿವೃದ್ಧಿಗೆ ಮುಡಾ ವತಿಯಿಂದ ಕಾರ್ಯಯೋಜನೆಗಳು ಅನುಷ್ಠಾನಕ್ಕೆ ಬರಲಿದೆ.

ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಡಾ ಅಧ್ಯಕ್ಷರಾದ   ಹೆಚ್.ವಿ.ರಾಜೀವ್ ಅವರು ಸೇರಿದಂತೆ ಜನಪ್ರತಿನಿಧಿಗಳಿಗೆ ಹಾಗೂ ವಿಶೇಷವಾಗಿ   ನಗರಾಭಿವೃದ್ಧಿ ಸಚಿವರಾದ   ಬಿ.ಎ. ಬಸವರಾಜು ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: