ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಸಾವು: ಸರ್ಕಾರದಿಂದ ಸುಳ್ಳು ಲೆಕ್ಕ; ಸಿದ್ದರಾಮಯ್ಯ ಆರೋಪ

ಬಳ್ಳಾರಿ,ಜೂ.22-ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಸೋಂಕಿನಿಂದ ಸಾವಿಗೀಡಾದವರ ಕುರಿತು ಸುಳ್ಳು ಲೆಕ್ಕ ಕೊಡುತ್ತಿದೆ. ಹೀಗಾಗಿ ಡೆತ್ ಆಡಿಟ್ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಜಿಲ್ಲೆಯ ತೋರಣಗಲ್ಲು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸೀಜನ್ ಇಲ್ಲದೇ 36 ಜನರು ಮೃತಪಟ್ಟರು. ಆದರೆ, ರಾಜ್ಯ ಸರ್ಕಾರ ಕೇವಲ ಮೂರು ಜನರು ಮಾತ್ರ ಮೃತಪಟ್ಟಿದ್ದಾರೆ ಎಂದು ಸುಳ್ಳು ಮಾಹಿತಿ ನೀಡುತ್ತಿದೆ. ಕೋವಿಡ್ ನಿಯಂತ್ರಿಸುವಲ್ಲಿ ವಿಫಲರಾಗಿರುವ ರಾಜ್ಯ ಸರ್ಕಾರ, ಸೋಂಕಿತರಿಗೆ ಸಕಾಲಕ್ಕೆ ಐಸಿಯು ಬೆಡ್ ಸಿಗದೆ, ಸಮರ್ಪಕವಾಗಿ ಆಕ್ಸಿಜನ್ ಸಿಗದೆ ಅನೇಕರು ಮೃತಪಟ್ಟಿದ್ದಾರೆ. 35 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ ಅದಕ್ಕಿಂತಲೂ ಹೆಚ್ಚು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟಾರೆ ಡೆತ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದರು.

ಮುಂದುವರೆದು ಮಾತನಾಡಿದ ಅವರು, ನಾನು ಸಿಎಂ ಆಗುತ್ತೇನೆಂದು ಎಲ್ಲೂ ಹೇಳಿಲ್ಲ. ಶಾಸಕರು ಹೇಳುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ಅಭಿಪ್ರಾಯ ಅಲ್ಲ. ಈ ಕುರಿತು ಯಾರೂ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು ಎನ್ನುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ ಪರ ಬ್ಯಾಟಿಂಗ್ ಮಾಡುತ್ತಿರುವ ಶಾಸಕರ ಹೇಳಿಕೆಗಳಿಗೆ ಪರೋಕ್ಷವಾಗಿ ಪುಷ್ಠಿ ನೀಡಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ ಎಂದ ಅವರು, ಚುನಾವಣೆ ಆಗಬೇಕು. ಪಕ್ಷಕ್ಕೆ ಬಹುಮತ ಲಭಿಸಬೇಕು. ಆಗ ಶಾಸಕಾಂಗ ಪಕ್ಷದ ನಾಯಕನ ಅಯ್ಕೆ ಪ್ರಕ್ರಿಯೆ ನಡೆಯುತ್ತದೆ. ಪಕ್ಷದ ವೇದಿಕೆಯಲ್ಲಿ ಈ ಅಭಿಪ್ರಾಯ ಇನ್ನು ಚರ್ಚೆ ಆಗಿಲ್ಲ. ಇದು ಮಹತ್ವದ ವಿಚಾರವೇ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಈ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಮೊದಲು ರಮೇಶ್ ಜಾರಕಿಹೊಳಿಯವರನ್ನು ಬಂಧಿಸಲಿ ಎಂದು ಆಗ್ರಹಿಸಿದರು.

ನ್ಯಾಯಾಂಗ ತನಿಖೆಯಾಗಲಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಅಕ್ರಮ ಸಂಪಾದನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಿಜೆಪಿಯವರಾದ ವಿಶ್ವನಾಥ್, ಬಸವನಗೌಡ ಪಾಟೀಲ್ ಯತ್ನಾಳ್, ಯೋಗೀಶ್ವರ ಅವರೇ 20 ಸಾವಿರ ಕೋಟಿ ರೂ. ಅವ್ಯವಹಾರ ಅಗಿದೆ ಎಂದು ಆರೋಪಿಸಿದ್ದಾರೆ. ಅಪ್ಪರ್ ಭದ್ರ ಪ್ರಾಜೆಕ್ಟ್ ನಲ್ಲಿ ಹತ್ತು ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂದು ವಿಶ್ವನಾಥ್ ಮಾಡಿರುವ ಆರೋಪ ಸುಳ್ಳೇ? ಸುಳ್ಳಾಗಿದ್ದರೆ ಸಚಿವ ಬೊಮ್ಮಯಿ ಅವರು ತನಿಖೆ ಮಾಡೋದು ಬೇಡ ಎಂದು ಯಾಕೆ ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಜಿಂದಾಲ್ ಉಕ್ಕು ಕಾರ್ಖಾನೆಗೆ ಜಮೀನು ಪರಭಾರೆ ವಿಷಯವಾಗಿ ಕೇಳಿದ ಪ್ರಶ್ನೆಗೆ, ಪ್ರಸ್ತುತ ಮಾರುಕಟ್ಟೆ ದರಕ್ಕೆ ಭೂಮಿ ಕೊಡೋದಾದರೆ ಕೊಡಲಿ. ಅದು ಬಿಟ್ಟು ಈ ಹಿಂದೆ ಒಪ್ಪಂದ ಮಾಡಿಕೊಂಡಿರುವ ದರಕ್ಕೆ ಕೊಡುವುದು ಸರಿಯಲ್ಲ ಎಂದರು. (ಎಂ.ಎನ್)

Leave a Reply

comments

Related Articles

error: