ಮೈಸೂರು

ಸಚಿವ ತನ್ವೀರ್ ಸೇಠ್ ದುಂಡಾವರ್ತನೆ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ:ಏ.28 ರಂದು

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಅಸಭ್ಯ ದುಂಡಾವರ್ತನೆ ಹಾಗೂ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಅಹಿಂದ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ನೌಕರರ ಹಾಗೂ ದಲಿತ ವಿದ್ಯಾರ್ಥಿ ಸಂಘಟನೆ ವತಿಯಿಂದ ಏ.28ರಂದು ಬೆಳಿಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಸಿ.ಎಸ್.ಟಿ. ನೌಕರರ ಪರಿಷತ್ ನ ಕಾರ್ಯದರ್ಶಿ ಚಿಕ್ಕಂದಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ರಾಜ್ಯ ಎಸ್.ಸಿ.ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಶಾಂತರಾಜ ಅವರು ಬೆಂಗಳೂರಿನ ವಿಧಾನಸೌಧದಲ್ಲಿರುವ ಸಚಿವ ತನ್ವೀರ್ ಸೇಠ್ ಕಛೇರಿಯಲ್ಲಿ ಕಳೆದ ಏ.9ರಂದು ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರ ಮಾಜಿ ಸೈನಿಕರಿಗೆ, ವಿಕಲಚೇತನರು ಸೇರಿದಂತೆ ಅಹಿಂದ ವರ್ಗಗಳಿಗೆ ವಿಶೇಷ 5 ಅಂಕಗಳ ಕೃಪಾಂಕಕ್ಕೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಕೆರಳಿದ ಸಚಿವರು ಶಾಂತರಾಜ ಅವರ ಮೇಲೆ ಹಲ್ಲೆ ನಡೆಸಿ ಜಾತಿ  ನಿಂದನೆ ಮಾಡಿ ಅವರ ವಿರುದ್ಧವೇ ವಿಧಾನಸೌಧ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ ದೌರ್ಜನ್ಯವೆಸಗಿರುವುದು ಖಂಡನೀಯ ಎಂದರು.

ದಲಿತರು ಹಕ್ಕು ಬಾಧ್ಯತೆಗಳನ್ನು ಕೇಳುವುದೇ ತಪ್ಪೆಂದರೆ ಸಮಸ್ಯೆ ನೋವುಗಳನ್ನು ಯಾರ ಬಳಿ  ತೋಡಿಕೊಳ್ಳಬೇಕೆಂದು ಪ್ರಶ್ನಿಸಿದರು. ಶಿಕ್ಷಣ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಳ್ಳಲು ನಾಲಾಯಕ್ . ತಕ್ಷಣವೇ ಅವರ ವಿರುದ್ದ ಕ್ರಮ ಜರುಗಿಸಬೇಕು ಹಾಗೂ ಸಚಿವ ತನ್ವೀರ್ ಸೇಠ್ ಅವರು ಬಹಿರಂಗವಾಗಿ ಶಾಂತರಾಜರವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿಯ ದಲಿತ ವಿದ್ಯಾರ್ಥಿ ಒಕ್ಕೂಟದ ಮಹೇಶ್ ಸೋಸ್ಲೆ, ರಾಜ್ಯ ನಾಯಕ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ದೇವರಾಜು ಕಾಟೂರು, ಲಿಂಗರಾಜು ಮಲ್ಲಳ್ಳಿ,  ಬೋವಿ ಸಮಾಜದ ನಾರಾಯಣ, ಕೆ.ಎಸ್.ಆರ್.ಟಿ.ಸಿ ಎಸ್.ಸಿ.ಎಸ್ಟಿ ಅಸೋಸಿಯೇಷನ್ ನ ಎಂ.ಕೆ.ರೇವಣ್ಣ ಹಾಜರಿದ್ದರು.  (ಕೆ.ಎಂ.ಆರ್)

 

 

Leave a Reply

comments

Related Articles

error: