ಮೈಸೂರು

ಜೂ.24 : ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ

ಮೈಸೂರು,ಜೂ.22:-ಮೈ ಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಇದೇ ಜೂನ್ 24ರಂದು ಗುರುವಾರ ಸಂಜೆ 6  ಗಂಟೆಗೆ ಬೆಳದಿಂಗಳ ಸಂಗೀತ-231ರ ಅಂಗವಾಗಿ ದ್ವಂದ್ವ ವಯೊಲಿನ್ ವಾದನವನ್ನು  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಏರ್ಪಡಿಸಲಾಗಿದೆ.
ವಿದ್ವಾನ್ ಮೈಸೂರು ಎಂ. ನಾಗರಾಜ್‍ ಅವರು ಮೈಸೂರಿನ ಖ್ಯಾತ ವಯೊಲಿನ್ ವಾದಕರಾಗಿದ್ದ ಆಸ್ಥಾನ ವಿದ್ವಾನ್ ಎಸ್. ಮಹದೇವಪ್ಪನವರ ಸುಪುತ್ರರು. ವಯೊಲಿನ್ ವಾದನ ಎಂಬುದು ಇವರ ಕೌಟುಂಬಿಕ ಹಿನ್ನೆಲೆಯ ಸ್ಥಾಯಿ. ಎಂಟನೆಯ ವಯಸ್ಸಿನಲ್ಲೆ ಸಾರ್ವಜನಿಕ ಸಂಗೀತ ಕಛೇರಿ ನೀಡಿದ ಪ್ರತಿಭಾವಂತರು. ಮೈಸೂರು
ಆಕಾಶವಾಣಿಯಲ್ಲಿ ನಿಲಯದ ಅಗ್ರಶ್ರೇಣಿಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಇಡೀ ದೇಶದ ಪ್ರಮುಖ ವಯೊಲಿನ್ ವಾದಕರ ಅಗ್ರಪಂಕ್ತಿಯಲ್ಲಿದ್ದಾರೆ. ರಾಷ್ಟ್ರದ ಎಲ್ಲ ಸಂಗೀತ ದಿಗ್ಗಜರಿಗೆ ವಯೊಲಿನ್ ಸಾಥ್ ನೀಡಿದ್ದಾರೆ. ಜುಗಲ್‍ಬಂದಿಗಳಲ್ಲಿ ಭಾಗವಹಿಸಿದ್ದಾರೆ. ಲಭಿಸಿರುವ ಪ್ರಶಸ್ತಿ, ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಸಂಗೀತ ಪ್ರಸ್ತುತಿಗಾಗಿ ಹಲವಾರು ದೇಶಗಳನ್ನು ಸುತ್ತಿದ್ದಾರೆ. ಕರ್ನಾಟಕ ಸಂಗೀತದ ಕೀರ್ತಿಧ್ವಜವನ್ನು ಎತ್ತಿ ಹಿಡಿದಿದ್ದಾರೆ. ವಾದನಕೌಶಲ, ಪ್ರತಿಭೆ ಮತ್ತು ವ್ಯುತ್ಪತ್ತಿ ಅಪಾರ. ವಿದ್ವತ್ತು, ವಿನಯ, ಸರಳತೆ ಇವರ ವ್ಯಕ್ತಿತ್ವದ ಮೌಲಿಕ ಅಂಶಗಳು.
ವಿದ್ವಾನ್ ಮೈಸೂರು ಎನ್. ಕಾರ್ತಿಕ್‍ರವರು ರಾಷ್ಟ್ರದ ಉದಯೋನ್ಮುಖ ವಯೊಲಿನ್ ವಾದಕರಲ್ಲಿ ಅತ್ಯಂತ ಭರವಸೆಯ ಕಲಾವಿದರು. ಇವರ ತಾತ ವಿದ್ವಾನ್ ಎಸ್. ಮಹದೇವಪ್ಪನವರು ಮತ್ತು ತಂದೆ ವಿದ್ವಾನ್ ಮೈಸೂರು ಎಂ. ನಾಗರಾಜ್‍ರವರು ಇವರ ಗುರುಗಳು. ಆಕಾಶವಾಣಿ ಮತ್ತು ದೂರದರ್ಶನದ “ಎ” ಶ್ರೇಣಿ ಕಲಾವಿದರು.
ಕೇಂದ್ರ ಸರ್ಕಾರದಿಂದಲೂ ಪುರಸ್ಕೃತರು. ಪ್ರಶಾಂತಿ, ನಾದಸೌಖ್ಯ ಇವರ ನುಡಿಸುವಿಕೆಯ ವೈಶಿಷ್ಟ್ಯ. ಸೋಲೋ,ದ್ವಂದ್ವ, ಜುಗಲಬಂದಿ ಎಲ್ಲ ರೀತಿಯ ಕಚೇರಿಗಳಲ್ಲೂ ಸಿದ್ಧಹಸ್ತರು. ಚಿಕ್ಕ ವಯಸ್ಸಿಗೇ ವಿದೇಶಗಳಲ್ಲಿ ತಮ್ಮ ವಾದನ
ಪ್ರಸ್ತುತಿ ಪಡಿಸಿರುವ ಅಪರೂಪದ ಸಾಧನೆ. ಅನೇಕ ಸಿ.ಡಿ.ಗಳಲ್ಲಿ ವಯೊಲಿನ್ ನುಡಿಸಿ ಪ್ರಸಿದ್ದರಾಗಿದ್ದಾರೆ.
ವಿದ್ವಾನ್ ಕೆ.ಯು. ಜಯಚಂದ್ರರಾವ್‍ರವರು ಶ್ರೇಷ್ಠ ಮೃದಂಗ ವಿದ್ವಾಂಸರು. ಭಾರತೀಯ ಲಯವಾದ್ಯ ಪ್ರಪಂಚದ ಮೇರು ಪ್ರತಿಭೆ. ಅನೇಕ ಅಂತಾರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಭಾಗವಹಿಸಿ ಇಪ್ಪತ್ತಕ್ಕೂ ಹೆಚ್ಚು
ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿಯ “ಎ” ಶ್ರೇಣಿ ಕಲಾವಿದರು. “ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್” ಸಂಸ್ಥೆಯನ್ನು ಕ್ರಿಯಾಶೀಲರಾಗಿ ಮುನ್ನಡೆಸುತ್ತಿದ್ದಾರೆ.
ವಿದ್ವಾನ್ ಗಿರಿಧರ್ ಉಡುಪರವರು ಘಟಂ ವಾದನಕ್ಕೆ ಮತ್ತೊಂದು ಹೆಸರು. ಸುಮಾರು 50 ದೇಶಗಳಲ್ಲಿ ಸಂಗೀತಯಾನ ಮಾಡಿರುವ ಹೆಗ್ಗಳಿಕೆ. ಬಹುತೇಕ ಎಲ್ಲ ಖ್ಯಾತ ಸಂಗೀತಗಾರರಿಗೂ ಪಕ್ಕವಾದ್ಯ ಸಹಕಾರ ನೀಡಿದ್ದಾರೆ.
ಪ್ರಸಾರ ಭಾರತಿಯ ಟಾಪ್ ಗ್ರೇಡ್ ಕಲಾವಿದರು. ಹರ್ಮನ್ ಮೈಕ್ರೋಫೋನ್ಸ್ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯಾಗಿರುವ ಅತ್ಯಂತ ಕಿರಿಯ ಕಲಾವಿದರು. ಅವರೇ ಸ್ಥಾಪಿಸಿರುವ “ಉಡುಪ ಫೌಂಡೇಷನ್” ಮತ್ತು “ಲಯತರಂಗ” ಅಭಿಯಾನಗಳ ಮೂಲಕ ಭಾರತೀಯ ಸಂಗೀತದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ.
ಈ ಕಾರ್ಯಕ್ರಮವನ್ನು ಕಲಾಸಕ್ತರು  Youtube http://Youtube.com/c/JSSMahavidyapeethaonline
https://www.facebook.com/JSSMVP  ಲಿಂಕ್‍ಗಳ ಮೂಲಕ ಆಲಿಸಲು ಕೋರಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: