ಮೈಸೂರು

ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ನೂತನ ಉಪ ನಿರ್ದೇಶಕರಾಗಿ ಡಿ.ಕೆ.ಶ್ರೀನಿವಾಸ ಮೂರ್ತಿ ಅಧಿಕಾರ ಸ್ವೀಕಾರ

ಮೈಸೂರು, ಜೂ.22:- ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನೂತನ ಜಿಲ್ಲಾ ಉಪ ನಿರ್ದೇಶಕರಾಗಿ ಇಂದು (ಜೂ.22) ಡಿ.ಕೆ.ಶ್ರೀನಿವಾಸ ಮೂರ್ತಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕೊರೊನಾ ಲಾಕ್‍ ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲಿ ನಾನು ಮೈಸೂರಿಗೆ ವರ್ಗವಾಗಿ ಬಂದಿದ್ದೇನೆ. ಮೈಸೂರು ಕಲೆಗಳ ತವರೂರು, ಸಾಂಸ್ಕೃತಿಕ ನಗರಿ. ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ. ಇಂತಹ ಪಾರಂಪರಿಕ ಇತಿಹಾಸವಿರುವ ಮೈಸೂರು ಜಿಲ್ಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಗಣನೀಯ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಶ್ರಮ ವಹಿಸುತ್ತೇನೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಆಯಾಯ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಏರ್ಪಾಡು ಮಾಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಎಲ್ಲ ಉಪನ್ಯಾಸಕ ವರ್ಗದೊಂದಿಗೆ ಕಾರ್ಯ ನಿರ್ವಹಿಸುತ್ತೇನೆಂದು ಅಭಿಪ್ರಾಯಪಟ್ಟರಲ್ಲದೇ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಕಾರ್ಯಾಗಾರಗಳನ್ನು ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿದ ವಿಷಯತಜ್ಞರನ್ನು ಕರೆಸಿ, ತರಬೇತಿ ಹಾಗೂ ಮಾಹಿತಿಯನ್ನು ಒದಗಿಸುವಲ್ಲಿ ಚಟುವಟಿಕೆಗಳನ್ನು ಕೊರೊನಾ ಕಳೆದ ನಂತರ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಲಯನ್ ದಿನೇಶ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನು ಗುರುತಿಸುವುದು ಪ್ರತಿಯೊಬ್ಬ ಶಿಕ್ಷಕನ ಜವಾಬ್ದಾರಿ. ಕಲಿಕೆಯಲ್ಲಿ ಆಸಕ್ತಿಯನ್ನು ಮೂಡುವಂತೆ ಮಾಡಿ, ವಿದ್ಯಾರ್ಥಿಗಳು ಪ್ರಗತಿ ಹೊಂದಲು ಸಹಕಾರ ನೀಡಬೇಕಾದದ್ದು ಕೂಡ ಶಿಕ್ಷಕ ಸಮೂಹದ ಕರ್ತವ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಅತ್ಯುತ್ತಮ ಫಲಿತಾಂಶ ಬರಲು ಕರ್ತವ್ಯ ನಿರ್ವಹಿಸುತ್ತೇವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗಾನಂದ, ಪ್ರಾಂಶುಪಾಲ ರಾಮೇಗೌಡ, ಸಮರ್ಪಣಾ ಶೈಕ್ಷಣಿಕ ಸಂಸ್ಥೆಯ ಖಜಾಂಜಿ ಹಾಗೂ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಎಂ.ಎಸ್.ಬಾಲಸುಬ್ರಹ್ಮಣ್ಯಂ ಉಪಸ್ಥಿತರಿದ್ದು, ನೂತನ ಜಿಲ್ಲಾ ಉಪ ನಿರ್ದೇಶಕರಿಗೆ ಸನ್ಮಾನಿಸಿ, ಗೌರವಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: