ಮೈಸೂರು

2017ರ ಅಂತ್ಯಕ್ಕೆ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸಲು ಕರೆ

ಮೈಸೂರು ಜಿಲ್ಲೆ ಮಲೇರಿಯಾ ಮುಕ್ತವಾಗಿದ್ದು 2017 ರಿಂದ ಇಂದಿನವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಎಸ್. ಸಂತಸ ವ್ಯಕ್ತಪಡಿಸಿದರು.

ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ‘ವಿಶ್ವ ಮಲೇರಿಯಾ ದಿನ’ ದ ಅಂಗವಾಗಿ ಆರೋಗ್ಯ ಇಲಾಖೆ ಆಯೋಜಿಸಿದ್ದ  ಮಾಹಿತಿ ಕಾರ್ಯಾಗಾರದಲ್ಲಿ  ಭಾಗವಹಿಸಿ ಮಾತನಾಡಿದ ಅವರು,  2006 ರಿಂದ ದೇಶದಲ್ಲಿ ಮಲೇರಿಯಾ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅದರಂತೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.  ಅಲ್ಲದೇ ಮಲೇರಿಯಾ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಮನೆಯ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಿ, ಅನಗತ್ಯ ನೀರುಶೇಖರಿಸದಿರಿ ಸೊಳ್ಳೆಗಳನ್ನು ನಿಯಂತ್ರಿಸಿ. ಜ್ವರ ಹಾಗೂ ಇತರ ಕಾಯಿಲೆಗಳ ಲಕ್ಷಣಗಳು ಕಂಡು ಬಂದಲ್ಲಿ ತ್ವರಿತವಾಗಿ ರಕ್ತ ಪರೀಕ್ಷೆ ಮಾಡಿಸಿ, ಸರ್ಕಾರದಿಂದ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆಯು ಉಚಿತವಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2014 ರಲ್ಲಿ 54, 2015ರಲ್ಲಿ 34, 2016ರಲ್ಲಿ 43 ಪ್ರಕರಣಗಳು ದಾಖಲಾಗಿದ್ದವು. ಆದರೆ 2017 ಜನವರಿಯಿಂದ ಇಂದಿನವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲದಿರುವುದು ಸಂತಸದ ಸಂಗತಿಯಾಗಿದೆ.  2017 ರ ಅಂತ್ಯಕ್ಕೆ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿಸುವ ಗುರಿ ಹೊಂದಲಾಗಿದ್ದು ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಕೋರಿದರು. ದೇಶದಲ್ಲಿ ಒರಿಸ್ಸಾ, ಬಿಹಾರ ಹಾಗೂ ಇತರೆ  ರಾಜ್ಯಗಳಲ್ಲಿ ಮಲೇರಿಯ ಪ್ರಕರಣಗಳು ಹೆಚ್ಚಿದ್ದು ಆ ರಾಜ್ಯಗಳಿಗೆ ತೆರಳಿದ ಪ್ರವಾಸಿಗಳಿಗೆ ರೋಗ  ಹರಡುವ ಸಂಭವವಿದೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಹಿತಿ ಕಾರ್ಯಾಗಾರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.(ಕೆ.ಎಂ.ಆರ್)

Leave a Reply

comments

Related Articles

error: