ಕರ್ನಾಟಕಪ್ರಮುಖ ಸುದ್ದಿ

ರಾಜ್ಯಕ್ಕೆ ಕಾಲಿಟ್ಟ ಡೆಲ್ಟಾ ಪ್ಲಸ್‌: ಇಬ್ಬರಲ್ಲಿ ರೂಪಾಂತರಿ ವೈರಸ್‌ ಪತ್ತೆ; ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಜೂ.23-ರಾಜ್ಯದಲ್ಲಿ ಕೋವಿಡ್ ವೈರಸ್ ನ ‘ಡೆಲ್ಟಾ ಪ್ಲಸ್‌’ ರೂಪಾಂತರಿ ಪತ್ತೆಯಾಗಿದೆ. ರಾಜ್ಯದಲ್ಲಿ ಇಬ್ಬರಲ್ಲಿ ಡೆಲ್ಟಾ ಪ್ಲಸ್ ತಳಿ ಕಾಣಿಸಿಕೊಂಡಿದೆ.

ಈ ವಿಚಾರವನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಖಚಿತಪಡಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಇಬ್ಬರಲ್ಲಿ ಡೆಲ್ಟಾ ಪ್ಲಸ್‌ ತಳಿ ಕಾಣಿಸಿಕೊಂಡಿದೆ. ಪೈಕಿ ಒಬ್ಬರು ತಮಿಳುನಾಡಿನಿಂದ ಬಂದವರಾಗಿದ್ದು, ಎನ್‌ಸಿಬಿಎಸ್‌ ಪರೀಕ್ಷೆ ನಡೆಸಿದಾಗ ಅವರಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರಿ ದೃಢಪಟ್ಟಿದೆ. ಹಾಗಾಗಿ ತಾರ್ಕಿಕವಾಗಿ ರಾಜ್ಯದ ಒಬ್ಬರಲ್ಲಷ್ಟೇ ಇದು ಕಾಣಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ರೂಪಾಂತರಿ ಇತರೆ ಡೆಲ್ಟಾ ತಳಿಗಿಂತ ಗಂಭೀರ ಸ್ವರೂಪದ್ದೇ ಅಥವಾ ಹೆಚ್ಚು ವೇಗವಾಗಿ ಹರಡಬಲ್ಲದೇ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ತಳಿಯ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದಿದ್ದಾರೆ.

ಈ ಮಧ್ಯೆ, ಭಾರತದ ನಾಲ್ಕು ರಾಜ್ಯಗಳಲ್ಲಿ ಒಟ್ಟು 40ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ 21, ಕೇರಳದಲ್ಲಿ 3 ಹಾಗೂ ಮಧ್ಯಪ್ರದೇಶದಲ್ಲಿ 1 ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಆತಂಕ ಏಕೆ?: ‘ಡೆಲ್ಟಾ ಪ್ಲಸ್‌’ ಎಂಬುದು ಭಾರತದಲ್ಲಿ 2ನೇ ಅಲೆಗೆ ಕಾರಣವಾಗಿದ್ದ ‘ಡೆಲ್ಟಾ’ ಮಾದರಿಯ ಹೊಸ ರೂಪಾಂತರಿ. ಲಸಿಕೆಯ ಪರಿಣಾಮಕಾರಿತ್ವವನ್ನು ತಗ್ಗಿಸುವುದು, ದೇಹದ ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಂಡು ಬೆಳವಣಿಗೆ ಹಾಗೂ ಪರಿಣಾಮಕಾರಿ ‘ಕಾಕ್‌ಟೈಲ್‌ ಔಷಧ’ ಚಿಕಿತ್ಸೆಗೂ ಬಗ್ಗದಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಈ ರೂಪಾಂತರಿಯ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತಜ್ಞರ ಎಚ್ಚರಿಕೆ: ಕೊರೊನಾ ಎರಡನೇ ಅಲೆಯಿಂದ ದೇಶ ಹೊರಬರುತ್ತಿರುವ ಬೆನ್ನಲ್ಲಿಯೇ ಮೂರನೇ ಅಲೆ ಭೀತಿ ಎದುರಾಗಿದ್ದು, ‘ಡೆಲ್ಟಾ’ ಸೋಂಕಿನ ರೂಪಾಂತರಿಯಾಗಿರುವ ‘ಡೆಲ್ಟಾ ಪ್ಲಸ್‌’ ದೇಶಾದ್ಯಂತ ಮೂರನೇ ಅಲೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಆಂಧ್ರ ಪ್ರದೇಶದಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರಿಯ 22 ಪ್ರಕರಣ ಪತ್ತೆಯಾಗಿದ್ದು, ಈ ರೂಪಾಂತರಿಯೇ ದೇಶಾದ್ಯಂತ ಮೂರನೇ ಅಲೆಯಾಗಿ ಪಸರಿಸಲಿದೆ ಎಂದು ಮಹಾರಾಷ್ಟ್ರದ ತಜ್ಞರು ಎಚ್ಚರಿಸಿದ್ದಾರೆ.

ಇನ್ನು ನಾಲ್ಕು ರಾಜ್ಯಗಳಿಗೆ ಡೆಲ್ಟಾ ಪ್ಲಸ್‌ ವ್ಯಾಪಿಸಿರುವ ಬೆನ್ನಲ್ಲೇ ಕೇಂದ್ರ ಸರಕಾರವು ನಿರ್ದೇಶನವೊಂದನ್ನು ಕಳುಹಿಸಿದ್ದು, ಯಾವುದೇ ಕಾರಣಕ್ಕೂ ಈಗಿರುವ ಡೆಲ್ಟಾ ಪ್ಲಸ್‌ ಪ್ರಕರಣಗಳು ಜಾಸ್ತಿಯಾಗಬಾರದು. ಇದಕ್ಕಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಎಲ್ಲಸೌಲಭ್ಯ ವಿಸ್ತರಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. (ಎಂ.ಎನ್)

Leave a Reply

comments

Related Articles

error: