ಮೈಸೂರು

ಕೋವಿಡ್-19 : 3 ನೇ ಅಲೆ ಮಕ್ಕಳಿಗೆ ಪ್ರಾರಂಭವಾಗಿದೆ ಎಂಬುದು ಸರಿಯಲ್ಲ ; ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮೈಸೂರು,ಜೂ.23:-  ಕೋವಿಡ್-19 3ನೇ ಅಲೆಗೆ ಮಕ್ಕಳನ್ನು ಆವರಿಸುತ್ತದೆ ಎಂಬ ಸುದ್ದಿ ಈಗಾಗಲೇ ಹರಡಿದ್ದು ಮಕ್ಕಳನ್ನು ಕಾಡುತ್ತಿದೆ ಎಂಬ ವಿಷಯವು ಮಾಧ್ಯಮದಲ್ಲಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ  ಜಿಲ್ಲೆಯ   ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಈ  ವಿಷಯಕ್ಕೆ ಸಂಬಂಧಿಸಿದಂತೆ,   ಕೋವಿಡ್-19  ದೃಢೀಕೃತ ಪ್ರಕರಣ ಬಗ್ಗೆ ಸಂಪೂರ್ಣವಾಗಿ ಅವಲೋಕಿಸಲಾಗಿದೆ. ಮಾರ್ಚ್-2020 ರಿಂದ ಜೂನ್-2021 ರವರೆವಿಗೆ 1 ಲಕ್ಷದ 63 ಸಾವಿರ ಪ್ರಕರಣಗಳು ಪಾಸಿಟೀವ್ ಎಂದು ಧೃಢಪಟ್ಟಿದೆ.

ಈ ಕೋವಿಡ್-19 ಪ್ರಕರಣಗಳನ್ನು ತಿಂಗಳವಾರು ವಿಶ್ಲೇಷಿಸಿದಾಗ ಪ್ರತಿ ತಿಂಗಳು ಪಾಸಿಟೀವ್ ಪ್ರಕರಣಗಳ ಪೈಕಿ 0-10 ವರ್ಷದ ಮಕ್ಕಳಲ್ಲಿ ಶೇಖಡಾ 2 ರಿಂದ 3 ರಷ್ಟು ಪ್ರಮಾಣದಲ್ಲಿ ಪಾಸಿಟೀವ್ ಇರುವುದು ಕಂಡುಬಂದಿದೆ. ಅಂದರೆ ಮಾರ್ಚ್ 2020 ರ ಮಾಹೆಯಿಂದ ಈವರೆಗೆ ಎಲ್ಲಾ ತಿಂಗಳುಗಳಲ್ಲಿ ಪಾಸಿಟೀವ್ ಗೆ ಅನುಗುಣವಾಗಿ ಶೇಖಡ 2 ರಿಂದ 3 ರಷ್ಟು ಪ್ರಮಾಣದಲ್ಲಿ ಈ ಗುಂಪಿನ ಮಕ್ಕಳಲ್ಲಿ ಆವರಿಸಿರುವುದು ಕಂಡುಬಂದಿರುತ್ತದೆ. ಜೂನ್-2021 ರ ಮಾಹೆಯಲ್ಲಿ ಪಾಸೀಟೀವ್ ಪ್ರಕರಣಗಳ ಸಂಖ್ಯೆ 19 ಸಾವಿರ ಇದ್ದು, ಅದರ 3 % ರಂತೆ ಸುಮಾರು 700 ಮಕ್ಕಳಲ್ಲಿ ದೃಢಪಟ್ಟಿರುವುದು ಕಂಡುಬಂದಿರುತ್ತದೆ, ಒಟ್ಟಾರೆಯಾಗಿ ಹೇಳುವುದೇನೆಂದರೆ ಕೋವಿಡ್-19 ಪ್ರಾರಂಭವಾದಾಗಿನಿಂದ ಈ ವರೆಗೆ ಮಾಹೆವಾರು ಸ್ಥಿತವಾಗಿ ಮಕ್ಕಳ ಪಾಸಿಟೀವ್ ಪ್ರಕರಣಗಳು ವರದಿಯಾಗಿದೆ.

0-10 ವರ್ಷದ ಮಕ್ಕಳ ಸಾವಿನ ಪ್ರಮಾಣವು ಈ 16 ತಿಂಗಳಲ್ಲಿ 9 ಇರುತ್ತದೆ. ಈ 9 ಪ್ರಕರಣಗಳನ್ನು ವಿಶ್ಲೇಷಿಸಿ ನೋಡಿದಾಗ ಬೇರೆ ರೋಗ ರುಜಿನಗಳು ಕೋವಿಡ್-19 ಜೊತೆ ಇರುವುದು ಕಂಡುಬಂದಿರುತ್ತದೆ. ಆದ್ದರಿಂದ ಈ ಸ್ಥಿತಿಯಲ್ಲಿ ಕೋವಿಡ್-19 ರ 3 ನೇ ಅಲೆ ಮಕ್ಕಳಿಗೆ ಪ್ರಾರಂಭವಾಗಿದೆ ಎಂಬುದು ಸರಿಯಲ್ಲ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತ ಯಾವುದೇ ರೀತಿಯಲ್ಲೂ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಈ ಮೂಲಕ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: