ಮೈಸೂರು

ಕರಾಮುವಿ ಅಕ್ರಮವನ್ನು ಸಿಬಿಐಗೆ ವಹಿಸಿ ನ್ಯಾಯದೊರಕಿಸಿಕೊಡಿ : ಪಿ.ಜಯರಾಜ ಹೆಗ್ಡೆ ಒತ್ತಾಯ

ದೇಶದ ಸುಮಾರು 5 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಗೊಳಿಸಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ರಮಗಳಲ್ಲಿ ಅಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ, ಪರೀಕ್ಷಾಂಗ ಕುಲಸಚಿವ ಹಾಗೂ ಅಧಿಕಾರಿಗಳ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಕೂಡಲೇ ಸಿಬಿಐ ತನಿಖೆಗೆ ವಹಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಪಿ.ಜಯರಾಜ ಹೆಗ್ಡೆ ಒತ್ತಾಯಿಸಿದರು.

ಬುಧವಾರ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ  ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬೆಳವಣಿಗೆಗಾಗಿ ಕೇಂದ್ರದ ಯುಜಿಸಿಯ ನಿಯಮಾನುಸಾರ 66 ಕೋರ್ಸ್‍ಗಳನ್ನು ಒಳಗೊಂಡಂತೆ ಪದವಿ ಮತ್ತು ಸ್ನಾತಕೋತರ ಪದವಿಗಳನ್ನು ಅನುಮತಿಯ ಮೇರೆಗೆ ಆರಂಭಿಸಲಾಯಿತು. ಆದರೆ 2010ರಲ್ಲಿ ರಂಗಪ್ಪ ಕುಲಪತಿಯಾದ ಬಳಿಕ 300ಕ್ಕೂ ಹೆಚ್ಚು ಕೋರ್ಸ್‍ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರಂಭಿಸಿದರು. ಅಲ್ಲದೆ 4000 ಅಧ್ಯಯನ ಕೇಂದ್ರಗಳನ್ನು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ದೆಹಲಿ, ಜಮ್ಮು ಕಾಶ್ಮೀರ, ಇನ್ನಿತರ ರಾಜ್ಯಗಳಲ್ಲಿ ಅನುಮತಿ ಇಲ್ಲದೆ ಅಧ್ಯಯನ ಕೇಂದ್ರಗಳನ್ನು ಆರಂಭಿಸಿ ಯುಜಿಸಿಯ ನಿಯಮಗಳನ್ನು ಉಲ್ಲಂಘಿಸಿದರು. ಇದರಿಂದ ಅನುಮತಿ ರದ್ದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.  ತಮ್ಮ ಒಣ ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿರುವ ರಂಗಪ್ಪ ಅವರ ಅವಧಿಯಲ್ಲಿ ಆಗಿರುವ ಅಕ್ರಮ ನೇಮಕಾತಿ, ಅಕ್ರಮ ಕಟ್ಟಡ ಕಾಮಗಾರಿಗಳಂತ ಗಂಭೀರ ಪ್ರಕರಣಗಳನ್ನು ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಎಂ.ಜಿ.ಸುರೇಶ್‍ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: