ಕರ್ನಾಟಕಪ್ರಮುಖ ಸುದ್ದಿ

ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಪಿಸಿ ಟ್ಯಾಬ್ ವಿತರಿಸಿದ ಸಚಿವ ಎಸ್.ಟಿ.ಸೋಮಶೇಖರ್

ರಾಜ್ಯ(ಬೆಂಗಳೂರು)ಜೂ.23: – ಸರ್ಕಾರದ ವತಿಯಿಂದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಸಿ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಕೆಂಗೇರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಮ್ಮ ಕ್ಷೇತ್ರದಲ್ಲಿ ಚಾಲನೆ ನೀಡಿದರು.

ಬಳಿ ಮಾತನಾಡಿದ ಸಚಿವರು, ಇಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಕಾಲೇಜಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಟ್ಯಾಬ್ ಕೊಡುವ ತೀರ್ಮಾನವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಧಾನಸೌಧದಲ್ಲಿ ಚಾಲನೆ ನೀಡುವ ಮೂಲಕ ಎಲ್ಲ ಕಡೆ ವಿದ್ಯಾರ್ಥಿಗಳಿಗೆ ವಿತರಣೆ ಕಾರ್ಯಕ್ರಮ ನಡೆದಿದೆ. ನಾನು ನನ್ನ ಕ್ಷೇತ್ರದಲ್ಲಿ ಪಿಸಿ ಟ್ಯಾಬ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.

56 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಾಲಿನ ಪುಡಿ
1 ರಿಂದ 10ನೇ ತರಗತಿಯ ಸುಮಾರು 56 ಲಕ್ಷ ವಿದ್ಯಾರ್ಥಿಗಳಿಗೆ ಅರ್ಧ ಕೆ.ಜಿ. ಹಾಲಿನ ಪುಡಿಯಂತೆ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ವಿತರಿಸಲು ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ. ಇದರ ವೆಚ್ಚ ಸುಮಾರು 156 ಕೋಟಿ ರೂಪಾಯಿ ಆಗಲಿದೆ. ಆಯಾ ಹಾಲು ಒಕ್ಕೂಟಗಳು ಇದನ್ನು ವಿತರಣೆ ಮಾಡಬೇಕಿದ್ದು, ಅವರಿಗೆ ಹಣವನ್ನು ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕ್ಷೇತ್ರದಲ್ಲಿ ಶಾಶ್ವತ ಸರ್ಕಾರಿ ಕಾಲೇಜು; ಸಚಿವ ಸೋಮೇಶಖರ್
ಹಾಲಿ ಕೆಂಗೇರಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಜಾಗದ ಸಮಸ್ಯೆ ಕೋರ್ಟ್ ಮೆಟ್ಟಿಲೇರಿದೆ. ಆದರೂ, ನನ್ನ ಕಡೆಯಿಂದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಮ್ಮ ಕ್ಷೇತ್ರದಲ್ಲಿ ಶಾಶ್ವತ ಸರ್ಕಾರಿ ಕಾಲೇಜು ಸ್ಥಾಪಿಸುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ಜುಲೈ ಅಂತ್ಯಕ್ಕೆ ಕ್ಷೇತ್ರ ಸಂಪೂರ್ಣ ವ್ಯಾಕ್ಸಿನೇಟೆಡ್; ಎಸ್ ಟಿ ಎಸ್
ನಮ್ಮ ಕ್ಷೇತ್ರದಲ್ಲಿ ಸಹ ಎಲ್ಲರಿಗೂ ವ್ಯಾಕ್ಸಿನೇಶನ್ ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಒಂದೇ ದಿನದಲ್ಲಿ ಕ್ಷೇತ್ರದ 19 ಸಾವಿರ ಮಂದಿಗೆ ವ್ಯಾಕ್ಸಿನೇಶನ್ ಮಾಡಲಾಗಿದೆ. ಅಲ್ಲದೆ, ಇದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಸಹ. ಕಾಲೇಜು ವಿದ್ಯಾರ್ಥಿಗಳಿಗೂ ವ್ಯಾಕ್ಸಿನೇಶನ್ ಕೊಡಿಸಲಾಗುವುದು. ಜುಲೈ ಅಂತ್ಯದ ವೇಳೆಗೆ ನಮ್ಮ ಯಶವಂತಪುರ ಕ್ಷೇತ್ರ ಸಂಪೂರ್ಣ ವ್ಯಾಕ್ಸಿನೇಟೆಡ್ ಆಗಬೇಕೆನ್ನುವುದು ನನ್ನ ಗುರಿಯಾಗಿದೆ. ಆ ಮೂಲಕ ನೂರಕ್ಕೆ ನೂರು ಸಾಧನೆಯನ್ನು ಸಾಧಿಸುತ್ತೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.

153 ವಿದ್ಯಾರ್ಥಿಗಳಿಗೆ ಪಿಸಿ ಟ್ಯಾಬ್
153 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ಯಾಮ್ಸಂಗ್ ಗ್ಯಾಲಾಕ್ಸಿ ಪಿಸಿ ಟ್ಯಾಬ್ ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇಂದು ಸಾಂಕೇತಿಕವಾಗಿ 11 ಸ್ಯಾಮ್ಸಂಗ್ ಗ್ಯಾಲಾಕ್ಸಿ ಪಿಸಿ ಟ್ಯಾಬ್ ಗಳನ್ನು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವಿತರಣೆ ಮಾಡಿದರು.

ಪೌರ ಕಾರ್ಮಿಕರು, ವಾಟರ್ ಮ್ಯಾನ್ ಗಳಿಗೆ ಪಡಿತರ ಕಿಟ್*
ಕೆಂಗೇರಿ ಕಸ ಸಂಸ್ಕರಣ ಘಟಕದ ಆವರಣದಲ್ಲಿ ಬಿಬಿಎಂಪಿ ಕೆಂಗೇರಿ ವಾರ್ಡ್ ಪೌರ ಕಾರ್ಮಿಕರು ಹಾಗೂ ವಾಟರ್ ಮ್ಯಾನ್ ಗಳಿಗೆ ಹಾಗೂ ಬಿಬಿಎಂಪಿ ಉಲ್ಲಾಳು ವಾರ್ಡ್ ಪೌರ ಕಾರ್ಮಿಕರು ಹಾಗೂ ವಾಟರ್ ಮ್ಯಾನ್ ಗಳಿಗೆ ನಗೆಮನೆ ಆವರಣದಲ್ಲಿ ಯಶವಂತಪುರ ಕ್ಷೇತ್ರ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಪಡಿತರ ಕಿಟ್ ಅನ್ನು ವಿತರಣೆ ಮಾಡಿದರು.

Leave a Reply

comments

Related Articles

error: