ಮೈಸೂರು

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ನೇಮಕಗೊಂಡ   ಶ್ರೀಕೃಷ್ಣ ಮಿತ್ತಲ್ ಗೆ ಸನ್ಮಾನ

ಮೈಸೂರು,ಜೂ.24:- ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣಾ ಸಮಿತಿ ವತಿಯಿಂದ     ಕರ್ನಾಟಕ ಸರ್ಕಾರದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ನೇಮಕಗೊಂಡ   ಶ್ರೀಕೃಷ್ಣ ಮಿತ್ತಲ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಲಾಕ್ ಡೌನ್  ಹಿನ್ನೆಲೆಯಲ್ಲಿ ನಿರಂತರವಾಗಿ 50 ದಿನಗಳಿಂದ ಕೆಎಂಪಿಕೆ ಟ್ರಸ್ಟ್ ಸದಸ್ಯರು 200 ಕ್ಕೂ ಹೆಚ್ಚು  ಬೀದಿ ನಾಯಿಗಳಿಗೆ  ಪೌಷ್ಠಿಕ ಆಹಾರ ನೀಡುತ್ತಾ ಬಂದಿದ್ದು ಇಂದು 50ನೇ ದಿನಕ್ಕೆ ಕಾಲಿಟ್ಟಿದೆ.

ಅದರ ಹಿನ್ನೆಲೆಯಲ್ಲಿ   ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ  ಡಾ. ಶ್ರೀಕೃಷ್ಣ ಮಿತ್ತಲ್ ಅವರು ಮಹಾರಾಜ ಮೈದಾನದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿ ಟ್ರಸ್ಟ್ ನ ಕಾರ್ಯಕ್ಕೆ  ಶ್ಲಾಘನೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ಕರ್ನಾಟಕದಲ್ಲಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಪಕ್ಷಿಗಳ ಸಂತತಿ ಕಾಪಾಡುವುದು ಮುಖ್ಯವಾಗಿರುತ್ತದೆ. ಅದರಂತೆಯೇ ನಗರಪ್ರದೇಶದಲ್ಲಿ ನಾಗರೀಕತೆಯೊಂದಿಗೆ ಹೊಂದಿಕೊಂಡಿರುವ ಪ್ರಾಣಿಪಕ್ಷಿಗಳ ಹಿತವನ್ನು ಕಾಪಾಡುವುದು ನಾಗರೀಕರ ಕರ್ತವ್ಯ. ಎಲ್ಲವನ್ನೂ ಸರ್ಕಾರವೇ ನಿಭಾಯಿಸಲು ಅಸಾಧ್ಯ, ಪ್ರಾಣಿ ಪಕ್ಷಿ ಸೇವಾ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಮುಖ್ಯವಾಗಿರುತ್ತದೆ. ಕೆಎಂಪಿಕೆ ಟ್ರಸ್ಟ್ ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ ಕಂಗಾಲಾಗಿದ್ದ ಬೀದಿನಾಯಿಗಳಿಗೆ ನಿರಂತರವಾಗಿ  ಆಹಾರ ನೀಡುತ್ತಿರುವ ಕಾರ್ಯ ಶ್ಲಾಘನೀಯ  ಎಂದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ ನಟ ದರ್ಶನ್ ಅವರ ಸಂದೇಶದಂತೆ ಮೃಗಾಲಯದ ಪ್ರಾಣಿಪಕ್ಷಿಗಳ ನೆರವಿಗೆ ಸಾಕಷ್ಟು ಮಂದಿ ಬಂದಿದ್ದು, ದತ್ತು ಸ್ವೀಕರಿಸಿದರು.  ಅದರಂತೆಯೇ ನಗರ ಬಡಾವಣೆಗಳಲ್ಲಿ ಸಾಕುಪ್ರಾಣಿಗಳ ಮತ್ತು ಬೀದಿಪ್ರಾಣಿಗಳ ಆಹಾರ ಹಾರೈಕೆ ನಿರ್ವಹಣೆಗೆ ನಗರಪಾಲಿಕೆ ಯೋಜನೆ ರೂಪಿಸಿ ಪ್ರಾಣಿ ಸೇವಾ ಸಂಘವನ್ನು ಬಳಸಿಕೊಂಡು ಸಹಾಯಧನ ನೀಡಲು ಮುಂದಾಗಬೇಕಿದೆ ಎಂದರು.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್  ಮಾತನಾಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಪಾಲಿಕೆಯೂ ವಲಯ ಮಟ್ಟದಲ್ಲಿ ವಾರ್ಡ್ ವಾರು ಪ್ರಾಣಿ ಪಕ್ಷಿಗಳ ಸೇವಾ ಸಂಘಗಳನ್ನು ಮತ್ತು ಸ್ವಯಂ ಸೇವಕರನ್ನು ಗುರುತಿಸಿ ಪ್ರಾಣಿಪಕ್ಷಿ ರಕ್ಷಣೆಗೆ ಆಹಾರ, ಆರೋಗ್ಯ ತಪಾಸಣೆಗೆ ಮುಂದಾಗಬೇಕು. ಕೇವಲ  ಬೀದಿನಾಯಿ ಹಸುಗಳನ್ನು  ಕೋತಿಗಳನ್ನು ಹಿಡಿಯುವುದಕ್ಕೆ ತಂಡ ರಚಿಸಿದರೇ ಪ್ರಯೋಜನವಿಲ್ಲ ಇದರ ಕಡೆ ಸರ್ಕಾರ ಚಿಂತಿಸಬೇಕು ಎಂದರು.

ಈ ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ನವೀನ್ ಕುಮಾರ್ , ಬಿಜೆಪಿ ಮೈಸೂರು ನಗರ ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ರಾಕೇಶ್ ಕುಂಚಿಟಿಗ ,ನವೀನ್, ಚಂದ್ರು ,ಜೀವನ್   ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: